ಹಾಸನ: ಪ್ರಧಾನಿ ನರೇಂದ್ರ ಮೋದಿಯವರು ಒಬ್ಬ ಕ್ರಿಕೆಟ್ ಬೆಟ್ಟಿಂಗ್ ಮಾಡುವ ವ್ಯಕ್ತಿಗೆ ನಮಸ್ಕಾರ ಮಾಡುತ್ತಾರೆ ಅಂದ್ರೆ ಬಿಜೆಪಿ ಪಕ್ಷ ಯಾವ ಪರಿಸ್ಥಿತಿಯಲ್ಲಿದೆ ಎಂಬುದು ಗೊತ್ತಾಗುತ್ತದೆ. ಈ ದೃಶ್ಯ ನೋಡಿದ್ರೆ ನಿಜಕ್ಕೂ ಬಿಜೆಪಿಗೆ ನಾಚಿಕೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
81ನೇ ದಿನದ ಪಂಚರತ್ನ ರಥಯಾತ್ರೆ ಇಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ನಂಜೇಗೌಡ ಉರಿಗೌಡ ಫ್ಲೆಕ್ಸ್ ವಿಚಾರ ನಮ್ಮ ಸಮಾಜಕ್ಕೆ ಮಾಡಿದ ಬಹುದೊಡ್ಡ ಅಪಮಾನ, ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟ ಮಾಡಲಾಗುವುದು. ಟಿಪ್ಪು ಸುಲ್ತಾನ್ ಅನ್ನು ಕುತಂತ್ರದಿಂದ ಕೊಲೆ ಮಾಡಿದರು ಎಂಬ ಇತಿಹಾಸವನ್ನು ಸೃಷ್ಟಿಮಾಡಿ ನಮ್ಮ ಒಕ್ಕಲಿಗ ಸಮಾಜಕ್ಕೆ ಅಪಮಾನ ಮಾಡಿದ್ದಾರೆ. ಈ ಇಬ್ಬರು ವ್ಯಕ್ತಿಗಳ ಫ್ಲೆಕ್ಸ್ ಹಾಕಿ ಮೋದಿ ಕಾರ್ಯಕ್ರಮಕ್ಕೆ ಬಂದ ವೇಳೆ ಆಗೌರವ ತೋರಿರುವುದು ಇಡೀ ಒಕ್ಕಲಿಗ ಸಮಾಜಕ್ಕೆ ಎಸಗಿದ ದ್ರೋಹ ಎಂದರು.
ಮಂಡ್ಯ ಜಿಲ್ಲೆಗೆ ಪ್ರಧಾನಿ ಮೋದಿ ಬಂದ ಹಿನ್ನೆಲೆಯಲ್ಲಿ ದಳಪತಿಗಳ ಎದೆಯಲ್ಲಿ ತಳಮಳ ಎಂಬ ವಿಚಾರವನ್ನು ನಾನು ಮಾಧ್ಯಮದಲ್ಲಿ ಗಮನಿಸಿದೆ. ಆದರೆ, ಮೋದಿ ಬಂದ ವಿಚಾರವೇ ನನಗೆ ಗೊತ್ತಿಲ್ಲ. ಅವರು ಬರೀ ಮಂಡ್ಯಕಲ್ಲ, ರಾಜ್ಯದ ಯಾವುದೇ ಭಾಗಕ್ಕೆ ಬಂದ್ರು ನಮಗೆ ಆತಂಕ ಇಲ್ಲ. ಯಾಕಂದ್ರೆ, ಅವರ ಮಾತುಗಳು ಜನರಿಗೆ ಖುಷಿ ಪಡಿಸಬಹುದು. ಆದರೆ, ಇವತ್ತಿನ ಪರಿಸ್ಥಿತಿಯಲ್ಲಿ ಅವರ ಮಾತುಗಳನ್ನು ನಂಬಲು ರಾಜ್ಯದ ಜನತೆ ಸಿದ್ಧರಿಲ್ಲ. ನಾವು ಎರಡು ರಾಷ್ಟ್ರೀಯ ಪಕ್ಷದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಬಜೆಟ್ ಮಂಡನೆ ಮಾಡಿದೆ. ಅದನ್ನ ಅವರು ಮಂಡ್ಯ ಬಜೆಟ್ ಅಂತ ಟೀಕೆ ಮಾಡಿದ್ರು. ನಂತರ ನಾನು ಕೊಟ್ಟ ಅನುದಾನಗಳನ್ನ ತಮ್ಮ ಸರ್ಕಾರದಲ್ಲಿ ತಡೆಹಿಡಿದು ಆ ಅನುದಾನವನ್ನ ಬೇರೆ ಯೋಜನೆಗಳಿಗೆ ವಿನಿಯೋಗ ಮಾಡಿದರು. ಅವರು ಇಲ್ಲಿಗೆ ಬಂದು ಅಬ್ಬರಿಸಿ ಬೊಬ್ಬಿರಿದರೆ ನಮ್ಮ ರಾಜ್ಯದ ಜನತೆಯಾಗಲಿ, ಕಾರ್ಯಕರ್ತರಾಗಲಿ ಭಯಪಡುವಂತಹ ಆತಂಕ ನಮಗಿಲ್ಲ ಎಂದರು.