ಮಂಡ್ಯ: ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರು ಅಂದಿನ ನಮ್ಮ ಮೈತ್ರಿ ಸರ್ಕಾರ ಕೆಡವಲು ಎರಡು ತಿಂಗಳ ಕಾಲ ಕರ್ನಾಟಕದ ಶಾಸಕರನ್ನ ಹೋಟೆಲ್‌ನಲ್ಲಿ ಬಂಧಿಸಿ ಇಟ್ಟುಕೊಂಡಿದ್ದರು. ಅದಕ್ಕೆ ತಕ್ಕ ಪ್ರತಿಫಲ ಈಗ ಸಿಕ್ಕಿದೆ. ಇದು ದೇವರು ಕೊಟ್ಟ ಶಿಕ್ಷೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ.. ಇಂದು ಕೆಆರ್‌ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಮಾತನಾಡಿದ ಅವರು, ಶಿವಸೇನೆಯವರು ಮೈತ್ರಿ ಸರ್ಕಾರ ರಚನೆಯಂತ ಮಹತ್ವದ ತೀರ್ಮಾನ ತೆಗೆದುಕೊಂಡಿರೋದು ಭಗವಂತನ ಇಚ್ಛೆ. ನಮ್ಮ ರೈತ ಪರ ಸರ್ಕಾರವನ್ನ ಕೆಡವಲು ಸಹಕಾರ ಕೊಟ್ಟ ಪರಿಣಾಮ ಇಂದು ಬಿಜೆಪಿಗೆ ಅಲ್ಲಿ ಅಧಿಕಾರ ಸಿಕ್ಕಿಲ್ಲ. ಯಡಿಯೂರಪ್ಪಗೂ ಮುಂದೆ ಇದೇ ರೀತಿಯ ಶಿಕ್ಷೆ ದೇವರಿಂದ ಕಾದಿದೆ ಎಂದು ಭವಿಷ್ಯ ನುಡಿದ್ರು.
ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು ಖಂಡಿತವಾಗಿಯೂ ಕರ್ನಾಟಕದ ಉಪಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ. ನಾಡಿನ ಮತದಾರರು ಪ್ರಜ್ಞಾವಂತರಿದ್ದಾರೆ ಎಂದು ಬಿಎಸ್‌ವೈ ಸರ್ಕಾರಕ್ಕೆ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಶರದ್ ಪವಾರ್ ಅಣ್ಣನ ಮಗನನ್ನ ಸೆಳೆದು ಕುತಂತ್ರದಿಂದ ಸರ್ಕಾರ ರಚನೆ ಮಾಡಲು ಯತ್ನಿಸಿ ಬಿಜೆಪಿ ನಾಯಕರು ಮುಖಭಂಗಕ್ಕೊಳಗಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಬಿಜೆಪಿ ಮೂರು ತಿಂಗಳಿಂದ ಸ್ವೇಚ್ಛಾಚಾರವಾಗಿ ಅಧಿಕಾರ ನಡೆಸುತ್ತಿದೆ. ಸಿಎಂ ಈ ಚುನಾವಣೆಯಲ್ಲಿ 15ಕ್ಕೆ 15 ಕ್ಷೇತ್ರಗಳಲ್ಲೂ ಗೆದ್ದಾಗಿದೆ ಅಂತಾ ಅಸಹಜ ಮಾತುಗಳನ್ನಾಡುತ್ತಿದ್ದಾರೆ. ದುಡ್ಡಿನ ಮದದಿಂದ ಈ ರೀತಿ ಮಾತುಗಳನ್ನಾಡುತ್ತಿದ್ದಾರೆ. ದುರಹಂಕಾರಕ್ಕೆ ಜನತೆ ತಕ್ಕ ಪಾಠ ಕಲಿಸ್ತಾರೆ. ಇದಕ್ಕೆ ಪೂರಕವಾಗಿ ಅನರ್ಹರನ್ನ ಊರುಗಳಿಗೆ ಬಿಟ್ಟುಕೊಳ್ತಿಲ್ಲ. ಇವತ್ತು ಅವರೆಲ್ಲರಿಗೂ ಮನವರಿಕೆ ಆಗಿದೆ. ಪ್ರಾಯಶ್ಚಿತ್ತಕ್ಕೆ ಒಳಗಾಗಬೇಕಿದೆ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದರು.
ಸ್ವಾಭಿಮಾನಕ್ಕೆ ಮತ ನೀಡಿ ಎಂಬ ಸಿಎಂ ಹೇಳಿಕೆಗೆ ಗರಂ ಆದ ಮಾಜಿ ಸಿಎಂ ಕುಮಾರಸ್ವಾಮಿ ಯಾವ ಸ್ವಾಭಿಮಾನ, ಮಾರಾಟ ಮಾಡೋದು ಸ್ವಾಭಿಮಾನವೇ.. ಜನರಿಂದ ಆಯ್ಕೆಯಾಗಿ ಮಾರಿಕೊಳ್ಳೋದು ಸ್ವಾಭಿಮಾನವೇ ಎಂದು ಪ್ರಶ್ನಿಸಿದರು.
ದೇವೇಗೌಡರು ಒಕ್ಕಲಿಗ ನಾಯಕರಲ್ಲ ಎಂಬ ಕಾಂಗ್ರೆಸ್ ಮುಖಂಡರ ಆರೋಪಕ್ಕೂ ಯಾರು ಶ್ರೇಷ್ಠ, ಯಾರು ಅಪ ಶ್ರೇಷ್ಠ ಅಂತಾ ನಾವೇನು ಹೇಳಿಲ್ಲ. ಯಾರು ಏನು ಹೇಳಿದ್ರೂ ಜನರ ತೀರ್ಮಾನ ಅಂತಿಮವಾಗಿರುತ್ತೆ. ಸರ್ಕಾರ ಅಸ್ಥಿರಗೊಳಿಸಲು ಬಿಡಲ್ಲ ಅಂದ್ರೆ ಯಾವ ಸರ್ಕಾರ ಅಂತಾ ಹೇಳಿದ್ದಾರ. ಬಿಜೆಪಿ ಅಂತಾ ಎಲ್ಲೂ ಹೇಳಿಲ್ಲ, ಮುಂದೆ ಕಾದು ನೋಡಿ ಯಾವ ಸರ್ಕಾರ ಉಳಿಸ್ತೀವಿ ಅಂತಾ. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ಲುವ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ. ನಾನು ಅಲ್ಲಿಗೆ ಪ್ರಚಾರಕ್ಕೆ ಹೋಗುವ ಅಗತ್ಯವಿಲ್ಲ. ಉಪ ಚುನಾವಣೆ ಫಲಿತಾಂಶದ ನಂತರ ರಾಜಕೀಯ ಕ್ರಾಂತಿಗಿಂತ ರಾಜಕೀಯ ಶುದ್ಧೀಕರಣ ಆಗಬಹುದು ಎಂದರು.