ಮಂಡ್ಯ: ಬಡ ಮಕ್ಕಳ ಕಲಿಕೆಗೆ ಸರ್ಕಾರ ಶಾಲೆ ನಿರ್ಮಿಸಿತ್ತು. ಆದರೆ, ಈ ಶಾಲೆಯನ್ನ ಧರ್ಮಗುರುವೊಬ್ಬರು ಅಕ್ರಮವಾಗಿ ಧಾರ್ಮಿಕ ಚಟುವಟಿಕೆಗಳ ಕೇಂದ್ರವನ್ನಾಗಿಸಿಕೊಂಡಿದ್ದಾರೆ ಎಂಬ ಆರೋಪ ಜಿಲ್ಲೆಯಲ್ಲಿ ಕೇಳಿಬಂದಿದೆ.
ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದ ಮಸೀದಿ ಸಮೀಪ ಸರ್ಕಾರಿ ಉರ್ದು ಶಾಲೆಯು ಕಳೆದ 45 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಈ ಶಾಲೆಗೆ ಶಿಕ್ಷಣ ಇಲಾಖೆಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾದ ಎಲ್ಲಾ ಸವಲತ್ತುಗಳೂ ಲಭ್ಯವಾಗಿವೆ. ಬಡ ಮಕ್ಕಳ ಕಲಿಕೆಗಾಗಿ ಸರ್ಕಾರ ಬಿಸಿಯೂಟ ಸಿದ್ಧಪಡಿಸಲು ಕಳೆದ 12 ವರ್ಷಗಳ ಹಿಂದೆ ರಾಜ್ಯ ಸರ್ಕಾರ ಅಡುಗೆ ಮನೆ ನಿರ್ಮಿಸಿ ಅಗತ್ಯ ಪರಿಕರ ಪೂರೈಕೆ ಮಾಡಿದೆ.
ಉರ್ದು ಶಾಲೆಯ ಆವರಣದಲ್ಲಿ ಕನ್ನಡ ಶಾಲೆಯ ಎರಡು ಕೊಠಡಿಗಳು ಮತ್ತು ವಿದ್ಯಾರ್ಥಿ ನಿಲಯ ಹಾಗೂ ಅಂಗನವಾಡಿ ಕೇಂದ್ರವೂ ಇದೆ. ಕೊರೊನಾದಿಂದ ಕೆಲ ಕಾಲ ಶಾಲೆ ಮುಚ್ಚಿದ್ದ ಕಾರಣ ಶಾಲೆಗೆ ಮಕ್ಕಳ ಆಗಮನವಾಗಿರಲಿಲ್ಲ. ಶಾಲೆ ಆರಂಭಿಸುವ ಮುನ್ನವೇ ಹೊರ ರಾಜ್ಯದಿಂದ ಬಂದ ಶ್ಯಾಮ್ ಕ್ಯೂಮರ್ ಸರ್ಕಾರಿ ಶಾಲೆಗೆ ಹಸಿರು ಬಣ್ಣ ಬಳಿಯುವ ಮೂಲಕ ವಾಸ್ತವ್ಯ ಹೂಡಿ ಆಕ್ರಮಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರಿ ಶಾಲೆಯೊಳಗೆ ಅಕ್ರಮ ಕೊಠಡಿಯೊಂದನ್ನು ನಿರ್ಮಿಸಿ ಶಾಲೆಯ ಎಲ್ಲಾ ಅಡುಗೆ ಪರಿಕರಗಳನ್ನು ತನ್ನ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ.