ಮಂಡ್ಯ:ಈಗೀಗ ಸರ್ಕಾರಿ ಅಧಿಕಾರಿಗಳು ಅಂದ್ರೆ, ತಮ್ಮ ಅಧಿಕಾರವನ್ನ ದುರುಪಯೋಗ ಮಾಡಿಕೊಳ್ಳುವುದೇ ಹೆಚ್ಚಾಗಿದೆ. ಇನ್ನ ಕೆಲವರು ತಾವಾಯ್ತು, ತಮ್ಮ ಕೆಲಸ ಆಯ್ತು ಅನ್ನೋರು ಇದ್ದಾರೆ. ಆದರೆ, ಇಲ್ಲೊಬ್ಬರು ಅಧಿಕಾರಿ ಅದೆಲ್ಲದಕ್ಕೂ ತದ್ವಿರುದ್ದವಾಗಿದ್ದು, ಅವರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಮಂಡ್ಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿರುವ ಸೋಮಶೇಖರ್ ವೃತ್ತಿಯಲ್ಲಿ ಸರ್ಕಾರಿ ಅಧಿಕಾರಿ ಆದರೂ, ಪ್ರವೃತ್ತಿಯಲ್ಲಿ ಉತ್ತಮ ಸಾಹಿತ್ಯಾಸಕ್ತರು, ಬರಹಗಾರರು ಆಗಿದ್ದಾರೆ. ಸರ್ಕಾರಿ ನೌಕರಿ ಜೊತೆಗೆ ಸಾಹಿತ್ಯ ಕೃಷಿ ಮೈಗೂಡಿಸಿಕೊಂಡಿರುವ ಸೋಮಶೇಖರ್ ರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ಸ್ತ್ರೀ ಕುಲಕ್ಕೆ ಅಂತಾನೇ ವಿಶೇಷ ಗೀತೆ ರಚನೆ ಮಾಡಿದ್ದಾರೆ.
ನಾರಿ ಶಕ್ತಿ ಎಂಬ ಶೀರ್ಷಿಕೆಯಡಿ ರಚಿಸಿರುವ ಗೀತೆಯಲ್ಲಿ ಜೀವ ಕೊಡೋದ್ರಿಂದ ಮುಕ್ತಿ ಕರುಣಿಸೋವರೆಗೂ ಹೆಣ್ಣು ಹೇಗೆಲ್ಲ ನಮಗೆ ಶಕ್ತಿಯಾಗಿರ್ತಾಳೆ, ಆಸರೆಯಾಗಿರ್ತಾಳೆ ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸ್ವತಃ ಸೋಮಶೇಖರ್ ಅವರೇ ರಚಿಸಿರುವ ಸಾಹಿತ್ಯಕ್ಕೆ, ಮೈಸೂರಿನ ಸಂಗೀತ ನಿರ್ದೇಶಕ ನೀತು ನಿನಾದ್ ಸಂಗೀತ ಸಂಯೋಜಿಸಿದ್ದಾರೆ. ಖ್ಯಾತ ಗಾಯಕ ನಿತಿನ್ ರಾಜಾರಾಂ ಶಾಸ್ತ್ರಿ ಹಾಗೂ ಯುವ ಪ್ರತಿಭೆ ರಶ್ಮಿ ಧರ್ಮೇಂದ್ರ ಧ್ವನಿಯಲ್ಲಿ ಹಾಡು ಮತ್ತಷ್ಟು ಇಂಪಾಗಿಸಿದೆ.