ಮಂಡ್ಯ: ಜಿಲ್ಲೆಯಲ್ಲಿ ಚಿನ್ನ ದೋಖಾ ಪ್ರಕರಣದಲ್ಲಿ ಮಹಜರು ನೆಪದಲ್ಲಿ ಮನೆಗೆ ಬಂದಿದ್ದ ಪೊಲೀಸರು ಚಿನ್ನ, ಹಣ ತಂದಿಟ್ಟು ತನ್ನ ಮಗನ ಮೇಲೆ ಆರೋಪ ಬರುವಂತೆ ಮಾಡಿದ್ದಾರೆ ಎಂದು ಪ್ರಕರಣದ ಬಂಧಿತ ಆರೋಪಿ ಸೋಮಶೇಖರ್ ತಾಯಿ ತಾಯಮ್ಮ ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಂದ ಚಿನ್ನ ಸಂಗ್ರಹಿಸಿ ವಂಚಿಸಿದ್ದ ಪ್ರಕರಣದಲ್ಲಿ ಪೊಲೀಸರೂ ಶಾಮೀಲಾಗಿದ್ದಾರೆ. ನಮ್ಮ ಪುತ್ರನ ಬಂಧನದ ನಂತರ ಪೊಲೀಸರು ನಮ್ಮ ಮನೆಗೆ ಬಂದಿದ್ದರು, ಆಗ ಅವರಿಗೆ ಯಾವುದೇ ಚಿನ್ನ, ಹಣ ಸಿಗಲಿಲ್ಲ. ಒಂದೆರಡು ದಿನಗಳ ನಂತರ ಮತ್ತೆ ಬಂದ ಪೊಲೀಸರು ಮಗನ ಕೊಠಡಿಯಲ್ಲಿ ಚಿನ್ನ ಇಡುವುದನ್ನು ನೋಡಿದ್ದೇವೆ. ಅದನ್ನು ವಿಡಿಯೋ ಮಾಡಲು ತೆರಳಿದಾಗ ನಮಗೆ ಬೆದರಿಕೆ ಹಾಕಿದರು ಎಂದು ದೂರಿದರು.
ಮನೆಯಲ್ಲಿ ನಾವು ಯಾವುದೇ ಚಿನ್ನ ಇಟ್ಟಿರಲಿಲ್ಲ, ಆದರೂ ಕೋಟ್ಯಂತರ ಮೌಲ್ಯದ ಚಿನ್ನ ಸಿಕ್ಕಿದೆ ಎಂದು ಹೇಳಿ ಮಗನನ್ನು ಸಿಲುಕಿಸಿದ್ದಾರೆ ಎಂದು ಆರೋಪಿಸಿದ ಅವರು, ಪೊಲೀಸರ ಬೆದರಿಕೆಯಿಂದಾಗಿ ನಾನು ಇಷ್ಟು ದಿನ ಬಾಯಿ ಬಿಟ್ಟಿರಲಿಲ್ಲ. ಎಲ್ಲಾ ಆರೋಪಗಳನ್ನು ನನ್ನ ಮಗನ ಮೇಲೆಯೇ ಹೊರಿಸುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಲು ಆಗುತ್ತಿಲ್ಲ. ಚಿನ್ನದ ವಹಿವಾಟು ನಡೆಸುತ್ತಿದ್ದ ಮಹಿಳೆಯರು, ಫೈನಾನ್ಸ್ ಸಿಬ್ಬಂದಿ ಹಾಗೂ ಪೊಲೀಸರು ನನ್ನ ಮಗನನ್ನು ಬಲಿಪಶು ಮಾಡಿದ್ದಾರೆ ಎಂದು ಆಳಲು ತೋಡಿಕೊಂಡರು.