ಮಂಡ್ಯ: ಗಣಪತಿ ಹಬ್ಬ ಇನ್ನೇನು ಬಂದೇ ಬಿಡ್ತು. ಗಣಪತಿ ಹಬ್ಬದಲ್ಲಿ ಗಣೇಶನ ಮೂರ್ತಿಯನ್ನು ಕೂರಿಸಿ ಭಕ್ತಿ-ಭಾವದಿಂದ ಪೂಜೆ ಸಲ್ಲಿಸುವುದು ವಾಡಿಕೆ. ಹೀಗಾಗಿ ಮಾರುಕಟ್ಟೆಯಲ್ಲೂ ಸಹ ಮಣ್ಣಿನ ಗಣಪ, ಪಿಒಪಿ ಗಣೇಶನ ಮೂರ್ತಿಗಳು ಮಾರಾಟಕ್ಕೆ ಸಜ್ಜಾಗಿವೆ. ಆದರೆ ಸಕ್ಕರೆ ನಗರಿ ಮಂಡ್ಯದಲ್ಲಿ ಎಲ್ಲಿಯೂ ಸಿಗದ ವಿಶೇಷ ಹಾಗೂ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳು ಬೆಲ್ಲದಲ್ಲಿ ತಯಾರಾಗಿದ್ದು, ಜನರ ಗಮನ ಸೆಳೆಯುತ್ತಿವೆ. ಹಾಗಾದ್ರೆ ಈ ಸ್ಟೋರಿ ನೋಡಿ.
ಹೌದು.. ಮಂಡ್ಯ ಅಂದ್ರೆ ವಿವಿಧ ಬಗೆಯ ಬೆಲ್ಲಕ್ಕೆ ಫೇಮಸ್. ಮಂಡ್ಯದ ಬೆಲ್ಲಕ್ಕೆ ಇಡೀ ದೇಶದಲ್ಲಿ ಬೇಡಿಕೆ ಇದೆ. ಆದರೆ ಇದೀಗ ಮಾರುಕಟ್ಟೆಗೆ ಬೆಲ್ಲದ ಗಣಪತಿ ಕೂಡ ಕಾಲಿಟ್ಟಿದ್ದಾನೆ. ಬೆಲ್ಲದ ಗಣಪತಿಗೆ ಬಾರಿ ಬೇಡಿಕೆ ಸಹ ಬಂದಿದೆ. ಸಕ್ಕರೆ ನಗರಿ ಮಂಡ್ಯದಲ್ಲಿ ಬೆಲ್ಲದ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಸಹ ಮಾಡಲಾಗುತ್ತಿದೆ. ಅವು ಕೂಡ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳು. ಮಂಡ್ಯದಲ್ಲಿ ಸಾಕಷ್ಟು ಆಲೆಮನೆಗಳು ಇವೆ. ಅದೇ ರೀತಿ ಮಂಡ್ಯ ತಾಲೂಕಿನ ಹಳುವಾಡಿ ಗ್ರಾಮದ ಆಲೆಮನೆಗಳಲ್ಲಿ ಬೆಲ್ಲದ ಗೌರಿ ಹಾಗೂ ಗಣೇಶನ ಮೂರ್ತಿ ತಯಾರು ಮಾಡಲಾಗುತ್ತಿದೆ. ಹಚ್ಚಿನಲ್ಲಿ ಪಾಕವನ್ನು ಹಾಕಿ ಗೌರಿ ಹಾಗೂ ಗಣೇಶನ ಮೂರ್ತಿಗಳನ್ನ ತಯಾರು ಮಾಡಿ ಮಾರಾಟ ಮಾಡಲಾಗುತ್ತಿದೆ. ಅರ್ಧ ಅಡಿಯಿಂದ ಎರಡೂವರೆ ಅಡಿಯವರೆಗೂ ಬೆಲ್ಲದ ಗಣೇಶನ ಮೂರ್ತಿಗಳನ್ನು ತಯಾರು ಮಾಡಿ ಮಾರಾಟ ಮಾಡಲಾಗುತ್ತಿದೆ.
ಅಂದಹಾಗೆ ಮಂಡ್ಯ ಜಿಲ್ಲೆಯ ಸಾವಿರಾರು ಆಲೆಮನೆಗಳಲ್ಲಿ ವಿವಿಧ ಬಗೆಯ ಬೆಲ್ಲವನ್ನು ತಯಾರಿಸಿ ಮಾರಾಟ ಕೂಡ ಮಾಡಲಾಗುತ್ತದೆ. ಆದರೆ ಇದುವರೆಗೆ ಕೇವಲ ಬೆಲ್ಲವನ್ನು ಮಾತ್ರ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರೋ ವಿಕಸನ ಸಂಸ್ಥೆ ಆಲೆಮನೆ ಮಾಲೀಕರಿಗೆ ಉತ್ತೇಜನ ನೀಡಿ, ಬೆಲ್ಲದಿಂದ ಗಣೇಶನ ಮೂರ್ತಿಗಳನ್ನ ತಯಾರಿಸಲು ಸಹಕಾರ ನೀಡಿದೆ.