ಮಂಡ್ಯ:ನಿಧನವಾದ ಕತ್ತೆಯನ್ನು(donkey) ಸಾಂಪ್ರದಾಯಿಕವಾಗಿ ಮಣ್ಣು ಮಾಡಿ ತಿಥಿ ಕಾರ್ಯ ನೆರವೇರಿಸಿದ ಘಟನೆ ಕೆಆರ್ ಪೇಟೆ ತಾಲೂಕಿನ ಗಂಗನಹಳ್ಳಿಯಲ್ಲಿ ನಡೆದಿದೆ.
ಕತ್ತೆಯನ್ನು ಸಾಂಪ್ರದಾಯಿಕವಾಗಿ ಮಣ್ಣು ಮಾಡಿದ ಗ್ರಾಮಸ್ಥರು ಕಳೆದ ಮೂರು ವರ್ಷಗಳ ಹಿಂದೆ ಕತ್ತೆಯೊಂದು ಗ್ರಾಮಕ್ಕೆ ಆಗಮಿಸಿತ್ತು. ಕುರಿ ಮಂದೆಯವರಿಗೆ ಸೇರಿದ ಗಂಡು ಕತ್ತೆ ಅವರೊಂದಿಗೆ ಹೋಗದೇ ಆಕಸ್ಮಿಕವಾಗಿ ಗ್ರಾಮದಲ್ಲಿಯೇ ಉಳಿಯಿತು.
ಗ್ರಾಮಕ್ಕೆ ಕತ್ತೆ ಆಗಮಿಸಿದ ನಂತರ ಗ್ರಾಮದಲ್ಲಿ ಒಂದಷ್ಟು ಒಳ್ಳೆಯ ಶುಭ ಕಾರ್ಯಗಳು ನಡೆಯಲಾರಂಭಿಸಿದವು. ಕತ್ತೆ ಬಂದು ನೆಲೆಸಿದ ನಂತರ ತಮ್ಮೂರಿನಲ್ಲಿ ಒಳ್ಳೆಯ ಕೆಲಸಗಳಾಗುತ್ತಿವೆ ಎಂದು ನಂಬಿದ ಗ್ರಾಮಸ್ಥರು ಕತ್ತೆಯನ್ನು ತಮ್ಮೂರಿನ ಅದೃಷ್ಟ ಎಂದೇ ಭಾವಿಸಿದ್ದರು.
ಕೆಲವು ದಿನಗಳ ಹಿಂದೆ ಆಕಸ್ಮಿಕವಾಗಿ ಚರಂಡಿಗೆ ಬಿದ್ದು, ಕತ್ತೆ ಕಾಲು ಮುರಿದುಕೊಂಡಿತ್ತು. ಗ್ರಾಮಸ್ಥರ ಆರೈಕೆ ಫಲಿಸದೇ ನ.7ರಂದು ಕತ್ತೆ ಸಾವನ್ನಪ್ಪಿದೆ. ನಿಧನವಾದ ಕತ್ತೆಯ ಅಂತ್ಯ ಸಂಸ್ಕಾರವನ್ನು ವಿಧಿ ವಿಧಾನಗಳೊಂದಿಗೆ ಮರದ ಹಲಗೆಯಲ್ಲಿ ಚಟ್ಟ ಕಟ್ಟಿ ನಾಲ್ಕು ಜನ ಹೆಗಲಲ್ಲಿ ಹೊತ್ತು ಮೆರವಣಿಗೆ ಮೂಲಕ ಗ್ರಾಮದ ಹೊರವಲಯದಲ್ಲಿ ಗ್ರಾಮಸ್ಥರು ಮಣ್ಣು ಮಾಡಿದ್ದಾರೆ.
ಗ್ರಾಮದ ಪ್ರತಿಯೊಂದು ಮನೆಯಿಂದ ತಲಾ 1 ಸಾವಿರ ರೂ.ಚಂದಾ ಹಣ ಎತ್ತಿ ಗ್ರಾಮಸ್ಥರೆಲ್ಲರೂ ಸೇರಿ ಕತ್ತೆಯ ತಿಥಿ ಮಾಡಿದ್ದಾರೆ. ಕತ್ತೆಯ 11ನೇ ದಿನದ ಪುಣ್ಯ ತಿಥಿಯಂದು ಗ್ರಾಮದಲ್ಲಿ ಅದ್ಧೂರಿ ಮಾಂಸದೂಟ ಸಿದ್ಧಪಡಿಸಿ ತಿಥಿ ಊಟ ಮಾಡಿ ಸತ್ತ ಕತ್ತೆಯ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ. ಕತ್ತೆಯ ಆತ್ಮಕ್ಕೆ ಮೋಕ್ಷ ಕೋರಿ ಕೆಲವರು ಕೇಶಮುಂಡನ ಮಾಡಿಸಿಕೊಂಡಿದ್ದು,ವಿಶೇಷವಾಗಿತ್ತು.
ಇದನ್ನೂ ಓದಿ:ಇದೊಂದು ಅದ್ಭುತ ಲೋಕ..ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ನಾಲ್ವರು ಗಗನಯಾನಿಗಳು..