ಮಂಡ್ಯ: ಶಾಂತಿ ಹಾಗೂ ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಯುಗಪುರುಷ ಮಹಾತ್ಮ ಗಾಂಧೀಜಿ. ಕೇವಲ 17 ತಿಂಗಳ ಕಾಲ ಪ್ರಧಾನಿ ಆಗಿದ್ದರೂ ದೇಶ ಮರೆಯಲಾರದಂತಹ ಆಡಳಿತ ನಡೆಸಿದವರು ಲಾಲ್ ಬಹದ್ದೂರು ಶಾಸ್ತ್ರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ ನಾರಾಯಣ ಗೌಡ ಹೇಳಿದರು.
ಜಿಲ್ಲೆಯ ಮದ್ದೂರಿನ ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ನಡೆದ 152ನೇ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 118ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದಕ್ಷಿಣ ಆಫ್ರಿಕಾದಲ್ಲಿ ಕರಿಯರು ಮತ್ತು ಬಿಳಿಯರ ನಡುವೆ ಹೋರಾಟ ನಡೆಯುತ್ತಿತ್ತು. ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ರೈಲಿನಲ್ಲಿ ಹೋಗುತ್ತಿದ್ದಾಗ ಕರಿಯರು ಎಂದು ಮೂದಲಿಸಿ ರೈಲಿನಿಂದ ಹೊರಗೆ ತಳ್ಳುತ್ತಾರೆ. ಆಗ ಅವರು ಬಿಳಿಯರ ದಬ್ಬಾಳಿಕೆ ಖಂಡಿಸಿ ಹೋರಾಟ ಆರಂಭಿಸುತ್ತಾರೆ. ಅಲ್ಲಿಂದ ಗಾಂಧೀಜಿಯವರ ಹೋರಾಟದ ಬದುಕು ಆರಂಭವಾಯಿತು ಎಂದರು.
ಗಾಂಧೀಜಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ನಾರಾಯಣ ಗೌಡ ಹಲವು ವರ್ಷಗಳ ಕಾಲ ಅಲ್ಲೇ ನೆಲೆಸಿದ್ದ ಗಾಂಧೀಜಿ ಅವರು 1915 ರಲ್ಲಿ ಭಾರತಕ್ಕೆ ಬರುತ್ತಾರೆ. ಅಲ್ಲಿಂದ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಆರಂಭಿಸುತ್ತಾರೆ. ನಮ್ಮ ರಾಜ್ಯಕ್ಕೆ 18 ಬಾರಿ ಮಹಾತ್ಮ ಗಾಂಧೀಜಿ ಅವರು ಬಂದಿದ್ದರು. ಗಾಂಧೀಜಿಯವರು ಬಂದು ಹೋದ ಮೇಲೆ ನಮ್ಮಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಹೆಚ್ಚಾಯಿತು. ಮೈಸೂರಿನಲ್ಲಿ ತ್ರಿವರ್ಣ ಧ್ವಜ ಹಾರಿಸಿದಾಗ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಲಾಯಿತು.
ಹೀಗಾಗಿ ಮೈಸೂರಿನಿಂದ ಹೊರಗೆ ಧ್ವಜಸತ್ಯಾಗ್ರಹಕ್ಕೆ ತೀರ್ಮಾನಿಸಲಾಯಿತು. ಇದೇ ಊರಿನ ತಿರುಮಲಗೌಡ ಅವರ ಜಮೀನಿನಲ್ಲಿ ಧ್ವಜಸ್ತಂಭ ನಿಲ್ಲಿಸಿದಾಗ, ಬ್ರಿಟಿಷ್ ಸರ್ಕಾರ ನಿಷೇಧಾಜ್ಞೆ ಹೇರಿತು. ನಿಷೇಧಾಜ್ಞೆ ಉಲ್ಲಂಘಿಸಿ ಶಿವಪುರದ ಈ ಪ್ರದೇಶದಲ್ಲಿ 1938ರ ಎಪ್ರಿಲ್ 9 ರಂದು ಟಿ. ಸಿದ್ದಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಮಾಡಲಾಯಿತು.
ಕೇವಲ 17 ತಿಂಗಳ ಕಾಲ ಪ್ರಧಾನಿ ಆಗಿದ್ದರೂ ಎಂದೂ ಮರೆಯದಂತಹ ಆಡಳಿತ ನಡೆಸಿದವರು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು. ಜೈ ಜವಾನ್ ಜೈ ಕಿಸಾನ್ ಎಂಬ ಘೋಷವಾಕ್ಯ ಮೊಳಗಿಸಿದವರು. ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿ ಜಯಿಸಿದವರು. ಅತ್ಯಂತ ಸರಳ, ಪ್ರಾಮಾಣಿಕ ವ್ಯಕ್ತಿ ಶಾಸ್ತ್ರಿಜಿ. ಇಂದು ಅವರ ಜಯಂತಿ. ಅವರ ಬದುಕೇ ನಮಗೆಲ್ಲ ಆದರ್ಶ ಎಂದು ಸಚಿವ ನಾರಾಯಣ ಗೌಡ ಸ್ವಾತಂತ್ರ್ಯ ಸಂಗ್ರಾಮದ ದಿನಗಳನ್ನು ಸ್ಮರಿಸಿದರು.