ಮಂಡ್ಯ:ಬರೋಬ್ಬರಿ ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ವ್ಯಕ್ತಿ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ. ಇಂದು ಸಿಎಂ ಸ್ಥಾನಕ್ಕೆ ಅವಧಿ ಪೂರ್ವವೇ ಅವರು ರಾಜೀನಾಮೆ ನೀಡಿದ್ದಾರೆ. ಈ ವಿಷಯ ತಿಳಿದು ಮಂಡ್ಯ ಜಿಲ್ಲೆಯ ತಮ್ಮ ಸ್ವಗ್ರಾಮ ಬೂಕನಕೆರೆಯಲ್ಲಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ಬೂಕನಕೆರೆಯಲ್ಲಿ ಬಡ ಕುಟುಂಬದಲ್ಲಿ ಸಿದ್ಧಲಿಂಗಪ್ಪ ಮತ್ತು ಪುಟ್ಟತಾಯಮ್ಮ ಅವರ ಮಗನಾಗಿ ಜನಿಸಿದ ಬಿ.ಎಸ್.ಯಡಿಯೂರಪ್ಪ ತಮ್ಮ ಕಾಲೇಜು ದಿನಗಳಲ್ಲಿಯೇ ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು. ಆದ್ರೆ ಕೆಲಸಕ್ಕಾಗಿ ಮಂಡ್ಯದಿಂದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ವಲಸೆ ಹೋಗಿ, 1965ರಲ್ಲಿ ಅಲ್ಲಿನ ರೈಸ್ ಮಿಲ್ನಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿಂದ ಯಡಿಯೂರಪ್ಪನವರ ಅದೃಷ್ಟವೇ ಬದಲಾಯಿತು ಎನ್ನುತ್ತಾರೆ ಅಲ್ಲಿನ ಗ್ರಾಮಸ್ಥರು.
ರಾಜ್ಯದಲ್ಲೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತ ಬಿಎಸ್‌ವೈ. ಇವರು 2018ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಕಾರಣದಿಂದ 104 ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲ ವಜುಭಾಯಿ ವಾಲಾ ಆಹ್ವಾನದಂತೆ 2018ರ ಮೇ 17ರಂದು 3ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದ್ರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿದ್ದರಿಂದ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಾರದೆ ಮೇ 23ರಂದು ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಂದು ಕೂಡ ತಮ್ಮ ಸ್ವಗ್ರಾಮ ಬೂಕನಕೆರೆಯಲ್ಲಿ ಮೌನ ಆವರಿಸಿತ್ತು.
ಬಳಿಕ 2019ರಲ್ಲಿ ಆಪರೇಷನ್ ಕಮಲ ನಡೆಸಿ, ಮೈತ್ರಿ ಸರ್ಕಾರವನ್ನು ಪತನಗೊಳಿಸಿದ ಅವರು, 2019ರ ಜುಲೈ 26 ರಂದು 4ನೇ ಬಾರಿಗೆ ಬಿ.ಎಸ್.ವೈ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಎಲ್ಲಿಲ್ಲದ ಖುಷಿ ಸಕ್ಕರೆ ನಾಡಿನ ಜನರದ್ದಾಗಿತ್ತು. ಆದ್ರೆ ಈಗಾಗಲೇ 79 ವರ್ಷವಾಗಿರುವ ಯಡಿಯೂರಪ್ಪನವರಿಗೆ ಇನ್ನೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶ ಇಲ್ಲದ ಕಾರಣ ಕರ್ನಾಟಕದಲ್ಲಿ ಬಿ.ಎಸ್.ವೈ ಯುಗ ಮುಗಿದ ಕಾರಣ ಸ್ವಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ.