ಮಂಡ್ಯ :ಮಗನಿಗೆ ಪಿಎಸ್‌ಐ ಕೆಲಸ ಕೊಡಿಸುವ ಆಸೆಯಲ್ಲಿ ರೈತನೋರ್ವ ಬರೋಬ್ಬರಿ 30.25 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದೀಗ ರೈತನ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ನಿಂಗರಾಜು ಎಂಬ ರೈತ ಮೋಸ ಹೋಗಿದ್ದಾರೆ. ಕೋಲಾರ ಮೂಲದ ಮಂಜುನಾಥ್ ಅಲಿಯಾಸ್ ಅಕ್ಷಯ್ ಮಂಜುನಾಥ್ ಎಂಬಾತನ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.
ನಿಂಗರಾಜು ಮಗ ಅರುಣ್ ಕುಮಾರ್ PSI ಪರೀಕ್ಷೆ ಬರೆದಿದ್ದರು. ಇದರ ನಡುವೆ ನಿಂಗರಾಜು ಅವರಿಗೆ ಬಿಜೆಪಿ ಮುಖಂಡರೊಬ್ಬರ ಮೂಲಕ ಅಕ್ಷಯ್ ಮಂಜುನಾಥ ಪರಿಚಯವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಬಿ.ವೈ.ವಿಜಯೇಂದ್ರ ಅವರ ಆಪ್ತ ಎಂದು ಮಂಜುನಾಥ ಹೇಳಿಕೊಂಡಿದ್ದಾನೆ. ಅಲ್ಲದೇ 40 ಲಕ್ಷ ರೂಪಾಯಿ ಕೊಟ್ಟರೆ ಕೆಲಸ ಕೊಡಿಸುವುದಾಗಿ ಭರವಸೆ ಸಹ ನೀಡಿದ್ದಾನೆ.
30.25 ಲಕ್ಷ ರೂ. ನೀಡಿದ್ದ ನಿಂಗರಾಜು :ಮಂಜುನಾಥ್ ಹೇಳಿದ ಮಾತನ್ನು ನಂಬಿ 38 ಲಕ್ಷ ಕೊಡುವುದಾಗಿ ಒಪ್ಪಿಸಿ, ಬಳಿಕ 30.25 ಲಕ್ಷ ರೂಪಾಯಿಯನ್ನು ನಿಂಗರಾಜು ನೀಡಿದ್ದಾರೆ. 17 ಲಕ್ಷ ರೂಪಾಯಿಯನ್ನು ಬ್ಯಾಂಕ್ ಮೂಲಕ RTGS ಮಾಡಿದ್ದರು. ಉಳಿದ 13.25 ಲಕ್ಷ ರೂಪಾಯಿಯನ್ನು ನಗದು ರೂಪದಲ್ಲಿ ನೀಡಿದ್ದರು. ಸಾಲ ಮಾಡಿ ಹಾಗೂ ತಮ್ಮ ಒಂದೂವರೆ ಎಕರೆ ಜಮೀನು ಮಾರಿ ನಿಂಗರಾಜು ಹಣ ನೀಡಿದ್ದರು.