ಮಂಡ್ಯ :ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಗಿರವಿ ಇಟ್ಟಿದ್ದ ಚಿನ್ನ ಮತ್ತು ಹಣ ದುರುಪಯೋಗಪಡಿಸಿಕೊಂಡು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಆತನಿಂದ 1.03 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ತಿಳಿಸಿದ್ದಾರೆ. ಮದ್ದೂರು ಶಿವಶಂಕರ್ ಎಂಬಾತನೇ ಬಂಧಿತ ಆರೋಪಿ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಎನ್.ಯತೀಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ, ಆರೋಪಿ ಪಟ್ಟಣದ ಐಐಎಲ್ಎಲ್ ಫೈನಾನ್ಸ್ ಸಂಸ್ಥೆಯಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದನು. ಸಂಸ್ಥೆಗೆ ಸೇರಿದ ಹಣ ದುರುಪಯೋಗಪಡಿಸಿಕೊಂಡು ಕಂಪನಿಗೆ ವಂಚಿಸಿದ್ದಲ್ಲದೆ, 12.38 ಲಕ್ಷ ರೂ. ಹಣ ನಷ್ಟ ಉಂಟುಮಾಡಿದ್ದಾಗಿ ಸಂಸ್ಥೆಯ ಟೆರಿಟೆರಿ ಮ್ಯಾನೇಜರ್ ಮೋಹನ್ ಕುಮಾರ್ ದೂರು ನೀಡಿದ್ದರು.
ದೂರಿನಲ್ಲಿ ಚಿನ್ನಾಭರಣ ಗಿರವಿ ಇಟ್ಟಿದ್ದ 64 ಗ್ರಾಹಕರ ಅಕೌಂಟ್‌ಗಳಲ್ಲಿನ 2958.50 ಗ್ರಾಂ. ತೂಕದ ಚಿನ್ನಾಭರಣಗಳನ್ನು ಸಹ ಆರೋಪಿ ಶಿವಶಂಕರ್ ದುರುಪಯೋಗಪಡಿಸಿದ್ದಾನೆ ಎಂದು ವಿವರಿಸಿದರು. ಪ್ರಕರಣದ ಆರೋಪಿಯ ಪತ್ನಿ ಸಹ ತನ್ನ ಗ೦ಡ ನಾಪತ್ತೆಯಾಗಿದ್ದಾನೆ ಎಂದು ಮದ್ದೂರು ಠಾಣೆಗೆ ದೂರು ನೀಡಿದ್ದರು.
ಈ ಎರಡೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯ ಪತ್ತೆಗೆ ತಂಡವನ್ನು ರಚಿಸಲಾಗಿತ್ತು. ಆರೋಪಿ ನಾಪತ್ತೆಯಾದ 10 ದಿನಗಳ ನಂತರ ಹುಲಿಯೂರುದುರ್ಗ ಬಸ್ ನಿಲ್ದಾಣದಲ್ಲಿ ಆರೋಪಿ ಶಿವಶಂಕರ್‌ನನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು. ಆತ ನೀಡಿದ ಸುಳಿವಿನ ಮೇರೆಗೆ ಮದ್ದೂರಿನ ಮುತ್ತೂಟ್ ಫೈನಾನ್ಸ್ ಮಣಪುರಂ ಗೋಲ್ಡ್ ಫೈನಾನ್ಸ್, ಕೋಸ ಮಟ್ಟಂ ಫೈನಾನ್ಸ್ ಹಾಗೂ ಸುಮತಿ ಜ್ಯುವೆಲ್ಲರಿ ಅಂಗಡಿಯಲ್ಲಿ ಗಿರವಿ ಇಟ್ಟಿದ್ದ 1,943.5 ಕೆ.ಜಿ. ಚಿನ್ನಾಭರಣ ಮತ್ತು ಒಂದು ಬುಲೆಟ್ ಬೈಕ್ ಸೇರಿದಂತೆ ಒಟ್ಟು 1,03,80,550 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಡಿವೈಎಸ್ಪಿ ನಾರಾಯಣಪ್ರಸಾದ್ ನೇತೃತ್ವದಲ್ಲಿ ಮದ್ದೂರು ಗ್ರಾಮಾಂತರ ಸಿಪಿಐ ಬಿ.ಆರ್. ಗೌಡ ಮತ್ತು ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಇದನ್ನೂ ಓದಿ:ಆಸೆ ತೀರಿಸುವಂತೆ ಪೀಡಿಸುತ್ತಿದ್ದ ಬಾವ: ನಿರಾಕರಿಸಿದ ನಾದಿನಿ, ಮಗಳ ಕೊಂದು ಸುಟ್ಟು ಹಾಕಿದ ಕಾಮುಕ!