ಮಂಡ್ಯ :ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ನಾಲೆಗೆ ಕಾರು ಉರುಳಿ ಸಾವನ್ನಪ್ಪಿದ ನಾಲ್ವರು ಮಹಿಳೆಯರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂ ಪರಿಹಾರ ಘೋಷಿಸಲಾಗಿದೆ. ಸಚಿವ ಹೆಚ್.ಸಿ ಮಹದೇವಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ವಿ.ಸಿ ನಾಲೆಗೆ ಕಾರು ಉರುಳಿ ಬಾಲಕಿ ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಶ್ರೀರಂಗಪಟ್ಟಣ ಗಡಿಭಾಗ ಗಾಮನಹಳ್ಳಿ ಬಳಿಯ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿತ್ತು. ಗಾಮನಹಳ್ಳಿಯಿಂದ ಬನ್ನೂರು ಮಾರ್ಗವಾಗಿ ವಿ.ಸಿ ನಾಲೆ ಮೇಲೆ ಸಂಚರಿಸುತ್ತಿದ್ದಾಗ ಕಾರು ನಾಲೆಗೆ ಉರುಳಿತ್ತು. ಇದರಿಂದಾಗಿ ಕಾರಿನಲ್ಲಿದ್ದ ಓರ್ವ ಬಾಲಕಿ ಸೇರಿ ಮೂವರು ಮಹಿಳೆಯರು ಮೃತಪಟ್ಟಿದ್ದರು. ತಮ್ಮ ಮನೆಯ ಕಾರ್ಯಕ್ರಮವೊಂದಕ್ಕೆ ಬಂಧುಗಳನ್ನು ಆಹ್ವಾನಿಸಿ ಬರುವಾಗ ವಿಶ್ವೇಶ್ವರಯ್ಯ ಕಾಲುವೆಗೆ ಕಾರು ಬಿದ್ದಿದೆ ಎಂದು ಮಂಡ್ಯ ಎಸ್ಪಿ ಎನ್ ಯತೀಶ್ ಮಾಹಿತಿ ನೀಡಿದ್ದರು.
ಅಪಘಾತದಲ್ಲಿ ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕು ಗೊರವನಹಳ್ಳಿಯ ಬಸವರಾಜು ಎಂಬವರ ಪತ್ನಿ ರೇಖಾ (35) ಮತ್ತು ಅವರ ಪುತ್ರಿ ಸಂಜನಾ (18), ಮಲ್ಲೇಶ್ ಎಂಬವರ ಪತ್ನಿ ಮಮತಾ (40) ಹಾಗೂ ಗಾಮನಹಳ್ಳಿ ಗ್ರಾಮದ ಮಹದೇವಮ್ಮ(55) ಅವರು ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವರು ತಲಾ 50,000 ರೂ ವೈಯಕ್ತಿಕ ಪರಿಹಾರ ನೀಡಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ, "ಗಾಮನಹಳ್ಳಿ ಹೊರ ವಲಯದಲ್ಲಿ ತಡೆಗೋಡೆ ಇದ್ದರೂ ಕಾರು ನಾಲೆಗೆ ಉರುಳಿ ದುರಂತ ಸಂಭವಿಸಿದೆ. ಇದೊಂದು ದುರದೃಷ್ಟಕರ ಘಟನೆ. ಮೃತರ ಕುಟುಂಬದವರಿಗೆ ಸಾಂತ್ವನ ಹೇಳುತ್ತೇನೆ. ಮುಖ್ಯಮಂತ್ರಿ ಅವರ ಜೊತೆ ಮಾತುಕತೆ ನಡೆಸಿ ಹೆಚ್ಚಿನ ಪರಿಹಾರ ದೊರಕಿಸಿಕೊಡುತ್ತೇನೆ" ಎಂದು ಭರವಸೆ ನೀಡಿದರು.