ಮಂಡ್ಯ: ಎಲ್ಲಾ ಜಾತಿಯಲ್ಲಿ ಕಡು ಬಡವರು ಯಾರಿದ್ದಾರೆ ಅವರಿಗೆ ಮೀಸಲಾತಿ ಸಿಗಬೇಕು. ನಾವು ಬಡವರ ಪರವಾಗಿರುವವರು ಎಂದು ಮಾಜಿ ಶಾಸಕ ರಮೇಶ್ ಬಾಬು ತಿಳಿಸಿದರು.
ಮಾಜಿ ಶಾಸಕ ರಮೇಶ್ ಬಾಬು ಪ್ರತಿಕ್ರಿಯೆ ಮಂಡ್ಯದ ಕಾಳೇನಹಳ್ಳಿ ಗ್ರಾಮದ ದೇವಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವರ್ಗದ ಬಡ ಜನರ ಪರವಾಗಿ ಹೋರಾಟ ಮಾಡಲು ನಾವು ಸಿದ್ದ. ನಮ್ಮ ಪಕ್ಷ ಕೂಡ ಇದಕ್ಕೆ ಸಿದ್ದವಿದೆ. ಎಲ್ಲ ವರ್ಗದ ಬಡವರಿಗೆ ಮೀಸಲಾತಿ ಸಿಗಬೇಕು ಅನ್ನೋದು ನಮ್ಮ ಕಾಂಗ್ರೆಸ್ ಪಕ್ಷದ ಸಿದ್ದಾಂತ. ಬಿಜೆಪಿ ಪಕ್ಷದ ಪರ ಇದ್ದ ಒಲವು ಇಂದು ಇಲ್ಲ. ಎಲ್ಲ ವಿಶ್ವಾಸವನ್ನ ಬಿಜೆಪಿ ಕಳೆದುಕೊಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ ಶೂನ್ಯವಾಗಿದೆ. ಅವರ ಅಧಿಕಾರದಲ್ಲಿ ಏನೂ ಕೆಲಸಗಳು ಆಗ್ತಿಲ್ಲ. ನಾಮಕಾವಸ್ಥೆ ಸರ್ಕಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಮ ಮಂದಿರದ ದೇಣಿಗೆ ವಿಚಾರಕ್ಕೆ ಪ್ರತಿಕ್ರಿಯಿಸಿ, ದೇಣಿಗೆ ನೀಡುವುದು ಅವರವರ ವೈಯಕ್ತಿಕ ವಿಚಾರ. ದೇಣಿಗೆ ಕೊಡಬಾರದು ಅನ್ನೋ ಕಟ್ಟು ನಿಟ್ಟು ನಾವು ಮಾಡಲ್ಲ. ಆದ್ರೆ ಹಿಂದೆ ತೆಗೆದುಕೊಂಡದ್ದು ಏನಾಯ್ತು? ಯಾರಿಗೆ ಲೆಕ್ಕ ನೀಡಿರುವಿರಿ?. ಪ್ರಧಾನ ಮಂತ್ರಿ ಪರಿಹಾರ ನಿಧಿ ಬಗ್ಗೆ ಪ್ರಶ್ನೆ ಮಾಡಬಾರದು ಅಂತಾರೆ. ಈ ರೀತಿ ಕಾನೂನು ಯಾವ ದೇಶದಲ್ಲಿದೆ ಎಂದು ಪ್ರಶ್ನಿಸಿದರು.
50 ಪೈಸೆ ಪೆಟ್ರೋಲ್ ಬೆಲೆ ಜಾಸ್ತಿಯಾದರೆ ಅವರು ರೋಡಿಗೆ ಬರ್ತಿದ್ರು. ಈಗ 100 ರೂಪಾಯಿ ಆಗಿದೆ. ಪೆಟ್ರೋಲ್ ಬೆಲೆ ಕಾಂಗ್ರೆಸ್ ಪಕ್ಷದಿಂದ ಹೆಚ್ಚಾಯ್ತು ಅಂತಾರೆ. ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟು ನೋಡಿ. ನಾವು ಏನ್ ಮಾಡುತ್ತೇವೆ ಅಂತಾ ಗೊತ್ತಾಗುತ್ತದೆ. ಸರ್ಕಾರದ ವಿರುದ್ಧ ಮಾತನಾಡಿದ್ರೆ ನಮ್ಮ ಮೇಲೆ ಕೇಸ್ ಹಾಕ್ತಾರೆ. ಹಾಗಾಗಿ ಜನರು ಹೆದರುತ್ತಾರೆ. ಪ್ರತಿಭಟನೆ ಮಾಡೋರನ್ನ ದೇಶ ದ್ರೋಹಿ ಅಂತಾರೆ. ಹೋರಾಟ ಮಾಡುವವರಿಗೆ ಕಳ್ಳರ ಪಟ್ಟ ಕಟ್ಟುತ್ತಾರೆ. ಇತ್ತೀಚಿನ ದಿನಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಪಕ್ಷದಲ್ಲಿ ಯಾವುದೇ ಒಡಕಿಲ್ಲ. ಪಕ್ಷದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಬೈದರೆ ಅವರಿಗೆ ಲಾಭವಾಗತ್ತೆ. ಹಿಗಾಗಿ ಅವರಿಬ್ಬರ ಬಗ್ಗೆ ಬೇರೆ ಪಕ್ಷದವರು ಮಾತನಾಡ್ತಾರೆ ಎಂದು ಅಪಹಾಸ್ಯ ಮಾಡಿದರು.