ಮಂಡ್ಯ: ಅರಕೆರೆ ಗ್ರಾಮದ ರಸ್ತೆ ಅಗಲೀಕರಣ ವೇಳೆ ಮನೆ ಮತ್ತು ಭೂಮಿ ಕಳೆದುಕೊಂಡ ಗ್ರಾಮಸ್ಥರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಶ್ರೀರಂಗಪಟ್ಟಣ ತಾಲೂಕಿನ ಮಾಜಿ ಶಾಸಕ ರಮೇಶ್ ಬಾಬು ಪ್ರತಿಭಟನೆ ನಡೆಸಿದರು.
ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ - ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ
ಅರಕೆರೆ ಗ್ರಾಮದ ರಸ್ತೆ ಅಗಲೀಕರಣ ವೇಳೆ ಮನೆ ಕಳೆದುಕೊಂಡ ಗ್ರಾಮಸ್ಥರಿಗೆ ಇನ್ನೂ ಪರಿಹಾರ ನೀಡಿಲ್ಲ. ತಕ್ಷಣವೇ ಜಿಲ್ಲಾಡಳಿತ ಗ್ರಾಮಸ್ಥರಿಗೆ ಪರಿಹಾರ ನೀಡಿ ನಂತರ ಕಾಮಗಾರಿ ಶುರು ಮಾಡುಬೇಕು ಎಂದು ಮಾಜಿ ಶಾಸಕ ರಮೇಶ್ ಬಾಬು ಒತ್ತಾಯಿಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ ಕಳೆದುಕೊಂಡವರಿಗೆ ಪರಿಹಾರ ಕೊಡದೇ, ರಸ್ತೆ ಅಗಲೀಕರಣಕ್ಕೆ ಮುಂದಾಗಿರುವ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ತಕ್ಷಣವೇ ಜಿಲ್ಲಾಡಳಿತ ಗ್ರಾಮಸ್ಥರಿಗೆ ಪರಿಹಾರ ನೀಡಬೇಕು. ನಂತರ ಕಾಮಗಾರಿ ಶುರು ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇನ್ನು ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರಮೇಶ್ ಬಾಬು, ಶಾಸಕರು ಸರ್ಕಾರದ ಮಟ್ಟದಲ್ಲಿ ಹೋಗಿ ಧರಣಿ ಮಾಡಿ ಅಭಿವೃದ್ಧಿ ಕೆಲಸ ಮಾಡಲಿ. ಆದರೆ ಇವರು ಜಿಲ್ಲಾಧಿಕಾರಿ ವಿರುದ್ಧ ಹೊರಾಟ ಮಾಡುತ್ತಿದ್ದಾರೆ. ಸಭೆಗಳಲ್ಲಿ ಕೂಗಾಡುವುದು ಹಾಗೂ ಒಬ್ಬ ಶಾಸಕರಾಗಿ ಜಿಲ್ಲಾಧಿಕಾರಿಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಸಲಹೆ ನೀಡಿದರು.