ಮಂಡ್ಯ :ಜಿಲ್ಲೆಯಲ್ಲಿ ನಡೆಯುತ್ತಿರುವಕಾವೇರಿ ನದಿ ನೀರಿನ ಹೋರಾಟಕ್ಕೆ ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಬೆಂಬಲ ನೀಡಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಇಂದು ರೈತ ಹಿತರಕ್ಷಣಾ ಸಮಿತಿಯಿಂದ ನಡೆಯುತ್ತಿದ್ದ ಹೋರಾಟದಲ್ಲಿ ಪುಟ್ಟರಾಜು ಭಾಗಿಯಾದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ನನ್ನ ಜಿಲ್ಲೆಗೆ ಯಾವುದೇ ಹಂತದಲ್ಲಿ ಅನ್ಯಾಯವಾದರೂ ಕಾವೇರಿ ಹಿತರಕ್ಷಣಾ ಸಮಿತಿ ಹಾಗು ಈ ಹಿಂದೆ ದಿವಂಗತ ಜಿ.ಮಾದೇಗೌಡರ ನೇತೃತ್ವದಲ್ಲಿಯೂ ನಾವೆಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇವತ್ತು ಹೆಚ್ಚಿನ ಮಟ್ಟದಲ್ಲಿ ಹೋರಾಟ ಮಾಡುವಂತಹ ಕಾರ್ಯಕ್ರಮಗಳನ್ನು ರೈತ ಹಿತರಕ್ಷಣಾ ಸಮಿತಿ ವತಿಯಿಂದ ಮಾಡುತ್ತಿದ್ದೇವೆ. ಇದಕ್ಕೆ ನಮ್ಮ ಜೆಡಿಎಸ್ ಪಕ್ಷಕ್ಕೂ ಕೂಡ ಬದ್ದ. ಶನಿವಾರ ಪಕ್ಷದ ವತಿಯಿಂದ ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್‌ನಿಂದ ಡಿಸಿ ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗು ಕೇಂದ್ರ ಸರ್ಕಾರದ ಕಣ್ಣು ತೆರೆಸುತ್ತೇವೆ. ನಮ್ಮ ರೈತರ ಕಷ್ಟಗಳನ್ನು ತಿಳಿಸುವ ಕೆಲಸವನ್ನು ದೊಡ್ಡ ಮಟ್ಟದಲ್ಲಿ ಮಾಡಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದರು.
ಇಲ್ಲಿ ಯಾರ ಬಗ್ಗೆಯೂ ಕೂಡ ಲಘುವಾಗಿ ಮಾತನಾಡುವ ಪ್ರಶ್ನೆ ಇಲ್ಲ. ಈ ಹೋರಾಟವನ್ನು ಜನಪ್ರನಿಧಿಗಳೇ ಕೈಗೆತ್ತಿಕೊಳ್ಳಬೇಕು. ಮೊದಲನಿಂದಲೂ ಈ ಪದ್ಧತಿ ಮಂಡ್ಯ ಜಿಲ್ಲೆಯಲ್ಲಿ ನಡೆದುಕೊಂಡು ಬಂದಿದೆ. ಹೀಗಾಗಿ ಎಲ್ಲ ನಾಯಕರು ಮುಂಬರುವ ದಿನಗಳಲ್ಲಾದರೂ ರೈತರ ಪರ ನಿಂತು ಹೋರಾಟ ಮಾಡುವ ಕೆಲಸವಾಗಬೇಕು ಎಂದು ಪುಟ್ಟರಾಜು ಒತ್ತಾಯಿಸಿದರು.
ಇದನ್ನೂ ಓದಿ :'ಕುಮಾರಸ್ವಾಮಿ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ದು ಯಾರು?' ಸಿದ್ದರಾಮಯ್ಯ ವಿರುದ್ಧ ಜಿ.ಟಿ.ದೇವೇಗೌಡ ವಾಕ್ಸಮರ