ಮಂಡ್ಯ:ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಬೀದಿ ಜಗಳಕ್ಕೆ ಬಿಟ್ಟು ಸರ್ಕಾರ ಏನು ಮಾಡುತ್ತಿದೆ?. ಇದರಲ್ಲಿ ಸರ್ಕಾರದ ಪಾತ್ರ ಏನಿದೆ? ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಪ್ರಶ್ನೆ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಮಂಡ್ಯ ಜಿಲ್ಲೆ ಒಂದೆ ಕಡೆ ಅಲ್ಲ, ಇಡೀ ರಾಜ್ಯದಲ್ಲೇ ನಡೆಯುತ್ತಿದೆ. ಗಣಿಗಾರಿಕೆಯಿಂದ ಕೆಆರ್‌ಎಸ್ ಡ್ಯಾಂಗೆ ತೊಂದರೆ ಇರೋದ್ರಿಂದ ನಮಗೆ ಆತಂಕ ಇದೆ. ಕನ್ನಂಬಾಡಿ ಬಿರುಕು ಚರ್ಚೆ ಮೂರು ವರ್ಷದಿಂದ ನಡೀತಾ ಇದೆ. ಆದರೆ ಕೆಆರ್‌ಎಸ್ ಡ್ಯಾಂ ಸುತ್ತಮುತ್ತಲಿನ ಗಣಿಗಾರಿಕೆ ನಿಲ್ಲಿಸೋಕೆ ಮೂರು ವರ್ಷ ಬೇಕಾ, ಡ್ಯಾಂ ನಿಂದ ರಾಜ್ಯಕ್ಕೆ, ಜಿಲ್ಲೆಗೆ, ತಮಿಳುನಾಡಿಗೆ ಉಪಯೋಗ ಇದೆ. ಆದರೆ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆ ಆಗಲಿ:
ಅಕ್ರಮ ಗಣಿಗಾರಿಕೆ ಸಿಬಿಐ ತನಿಖೆಗೆ ವಹಿಸಬೇಕು. ಅಕ್ರಮ ಗಣಿಗಾರಿಕೆ ಹಾಗೂ ಮನ್ಮುಲ್ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಸುಮಲತಾ, ಮಾಜಿ ಸಿಎಂ ಕುಮಾರಸ್ವಾಮಿ ಬರೆದುಕೊಡ್ಲಿ ಎಂದು ಸಲಹೆ ನೀಡಿದರಲ್ಲದೆ ಇದರ ಬಗ್ಗೆ ಬೀದಿ ಜಗಳ ಮಾಡಿಕೊಂಡು ಕಿತ್ತಾಡ್ತಿರೋದು ಸರಿ ಕಾಣುತ್ತಿಲ್ಲ. ಇವರ ಜಗಳದಿಂದ ಜಿಲ್ಲೆಗೆ ಉಪಯೋಗ ಇಲ್ಲ ಎಂದರು.