ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಚುನಾವಣೆ ನಂತರವೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವೆ ಒಕ್ಕಲಿಗರ ಅಸ್ಮಿತೆ, ಜಿಲ್ಲೆಯ ಅಭಿವೃದ್ದಿ, ಅನುದಾನ ವಿಚಾರವಾಗಿ ಮಾತಿನ ಚಕಮಕಿ ಆರಂಭವಾಗಿದೆ. ಒಬ್ಬರ ವಿರುದ್ದ ಒಬ್ಬರು ಟಾಕ್ ಫೈಟ್ ಆರಂಭಿಸಿದ್ದಾರೆ. ಇನ್ನು ಸದನದಲ್ಲಿ ಹೆಚ್ಡಿಕೆ ವಿರುದ್ದ, ಸಚಿವ ಚಲುವರಾಯಸ್ವಾಮಿ ಏಕವಚನ ಪದ ಪ್ರಯೋಗ ಮಾಡಿದ ನಂತರ, ಕೆರಳಿರೋ ಜೆಡಿಎಸ್ ನಾಯಕರು ಒಗ್ಗಟ್ಟು ಪ್ರದರ್ಶನದ ಜೊತೆಗೆ ಸಚಿವ ಚಲುವರಾಯಸ್ವಾಮಿ ವಿರುದ್ದ ಮುಗಿ ಬೀಳುತ್ತಿದ್ದಾರೆ.
ಅಂದ ಹಾಗೆ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಕೆಎಸ್ಆರ್ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಇದೇ ವಿಚಾರವಾಗಿ ಹೆಚ್ಡಿಕೆ ಹಾಗೂ ಚಲುವರಾಯ ಸ್ವಾಮಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಆನಂತರ ನಿನ್ನೆ ಮದ್ದೂರಿನಲ್ಲಿ ಮಾತನಾಡಿದ್ದ ಸಚಿವ ಚಲುವರಾಯಸ್ವಾಮಿ, ಹೆಚ್ಡಿಕೆ ವಿರುದ್ದ ವಾಗ್ದಾಳಿ ನಡೆಸಿದ್ರು. ಒಕ್ಕಲಿಗರು ಅವರ ಕಣ್ಣಿಗೆ ಕಾಣುವ ಹಾಗಿಲ್ಲ. ಮಂಡ್ಯ ಜಿಲ್ಲೆಯ ಅಭಿವೃದ್ದಿ ಕೂಡ ಮಾಡಲು ಬಿಡುವುದಿಲ್ಲ. ತಾವೂ ಅಭಿವೃದ್ದಿ ಮಾಡಲಿಲ್ಲ ಎಂದು ಹೇಳಿಕೆ ನೀಡಿದ್ರು.
ಇನ್ನು ಸಚಿವ ಚಲುವರಾಯಸ್ವಾಮಿ ವಿರುದ್ದ ಕೆರಳಿ ಕೆಂಡವಾಗಿರೋ ಮಂಡ್ಯದ ಜೆಡಿಎಸ್ ನಾಯಕರು ಇವತ್ತು ಒಗ್ಗಟ್ಟು ಪ್ರದರ್ಶಿಸಿ, ಮಂಡ್ಯದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಸಚಿವ ಚಲುವರಾಯಸ್ವಾಮಿ ವಿರುದ್ದ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ರು. ಸಚಿವ ಚಲುವರಾಯ ಸ್ವಾಮಿ ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಾರೆ. ಯಾರು ಇವರು. ಸಿಎಂ ಅವರ ಮಗನ ಇವರು. ಈತನಿಗೆ ಶಾಸಕನನ್ನ ಮಾಡಿದ್ದು ಯಾರು.? ಕ್ಲಾಸ್ 3 ಗುತ್ತಿಗೆದಾರ ಈತ. ನಿನ್ನನ್ನ ಶಾಸಕ ಮಾಡಿ, ಮಂತ್ರಿ ಮಾಡಿದ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ನಾಯಕರನ್ನ ಮೆಚ್ಚಿಸಲು ವಿಧಾನಸಭೆಯಲ್ಲಿ ಮಾತನಾಡುತ್ತಾರೆ. ದೇವೇಗೌಡರ ಮಗ ಎಂಬ ಕಾರಣಕ್ಕೆ ಕುಮಾರಸ್ವಾಮಿ ಅವರನ್ನ ಮುಂದೆ ತಂದಿದ್ದೀರಿ. ಕುಮಾರಸ್ವಾಮಿ ಅವರು ಚಲುವರಾಯ ಸ್ವಾಮಿ ಅವರನ್ನ ಬೆಳೆಸಿದ್ದಾರೆ. ನಾಚಿಕೆ, ಮರ್ಯಾದೆ ಇಟ್ಟುಕೊಂಡು ಮಾತನಾಡಿ. ಜನ ಇದನ್ನ ಮೆಚ್ಚುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ರು.
ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ:ಇನ್ನು ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ, ಸಚಿವ ಚಲುವರಾಯಸ್ವಾಮಿ ವಿರುದ್ದ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ರು. ಸಚಿವ ಚಲುವರಾಯಸ್ವಾಮಿ ಸುಳ್ಳುಗಾರ ಸುಳ್ಳನ್ನೇ ಹೇಳಿದ್ದಾನೆ. ಇವರೇ ವರ್ಗಾವಣೆಗೆ ಪತ್ರ ಕೊಟ್ಟಿದ್ದಾರೆ. ತನಿಖೆ ಆಗಲಿ ಸತ್ಯಾಂಶ ಹೊರ ಬರಲಿದೆ. ನಾವು ತಂದ ಅನುದಾನವನ್ನ ಉಸ್ತುವಾರಿ ಸಚಿವರಾದ ನಂತರ ತಡೆ ಹಿಡಿದಿದ್ದೀರಿ. ಕೆಲ ಗುತ್ತಿಗೆದಾರರಿಗೆ ಹೆದರಿಸಿದ್ದಾರೆ. ಇವರ ಉದ್ದೇಶ ಏನು. ಕೆಲವರನ್ನು ಕರೆಸಿ ಏನು ಮಾತನಾಡಿದ್ದೀರಿ. ಎಷ್ಟು ಆಫರ್ ಇಟ್ಟಿದ್ದೀರಿ. ನಾಗಮಂಗಲ ಕ್ಷೇತ್ರದಲ್ಲೇ ಒಂದು ಕ್ಯಾಬಿನೆಟ್ ಇದೆ. ಹಲವರನ್ನು ವರ್ಗಾವಣೆ ಮಾಡಿಸುತ್ತಿದ್ದಾರೆ. ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಹೊಸ ಅನುದಾನ ತನ್ನಿ ಕೆಲಸ ಮಾಡಿ. ನಾವು ತಂದಿದ್ದ ಅನುದಾನ, ಕಾಮಗಾರಿ ಯಾಕೆ ತಡೆ ಹಿಡಿಯುತ್ತಿದ್ದೀರಿ.