ಉದ್ಧವ್ ವಿರುದ್ಧ ಹೆಚ್ಡಿಕೆ ವಾಗ್ದಾಳಿ ಮಂಡ್ಯ : ಜಿಲ್ಲೆಯಲ್ಲಿ ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಪಂಚರತ್ನ ರಥಯಾತ್ರೆಯ ಇಂದು ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿತು. ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ ಹಾಗೂ ಅಪಾರ ಜೆಡಿಎಸ್ ಕಾರ್ಯಕರ್ತರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಹೆಚ್ಡಿಕೆ, ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಹೇಳುವ ಮೂಲಕ ಉದ್ದಟತನ ತೋರಿಸಿದ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾಮಾನ್ಯ ಪ್ರಜ್ಞೆ ಇರುವ ಯಾವೊಬ್ಬ ವ್ಯಕ್ತಿಯೂ ಹೀಗೆ ಮಾತನಾಡುವುದಿಲ್ಲ ಎಂದು ಕಿಡಿಕಾರಿದರು.
ದೇಶದ ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಉದ್ದೇಶ: ಮಹಾರಾಷ್ಟ್ರದ ನಾಯಕರ ಚಿತಾವಣೆಗೆ ತಿರುಗೇಟು ನೀಡುವ ಶಕ್ತಿ ಈ ಬಿಜೆಪಿ ಸರಕಾರಕ್ಕಿಲ್ಲ. ಈ ಸರ್ಕಾರಕ್ಕೆ ಬೆನ್ನೂ ಇಲ್ಲ, ಮೂಳೆನೂ ಇಲ್ಲ. ಬೆಳಗಾವಿ ವಿಷಯದಲ್ಲಿ ತಮ್ಮ ತಾಕತ್ತನ್ನು ಪ್ರಧಾನಿ ಹತ್ತಿರ ತೋರಿಸಿ ಬನ್ನಿ ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಹೆಚ್ಡಿಕೆ ಸವಾಲು ಹಾಕಿದರು. ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದ ಹಲವು ಪಕ್ಷಗಳು ಮತ್ತು ಸರ್ಕಾರ ಬೆಳಗಾವಿ ಜಿಲ್ಲೆಯನ್ನು ಮಹಾರಾಷ್ಟ್ರ ಸೇರ್ಪಡೆಗೆ ಒತ್ತಾಯ ಮಾಡುತ್ತಿರುವುದು ದೊಡ್ಡ ಕುತಂತ್ರ. ಇದು ದೇಶದ ಒಕ್ಕೂಟದ ವ್ಯವಸ್ಥೆಯನ್ನು ಹಾಳು ಮಾಡುವ ಉದ್ದೇಶವಾಗಿದೆ ಎಂದರು.
ಒಂದು ದೇಶ, ಒಂದು ಭಾಷೆ, ಒಂದು ದೇಶ ಒಂದು ಚುನಾವಣೆ ಎನ್ನುವ ಬಿಜೆಪಿ ನಾಯಕರು, ಬೆಳಗಾವಿಯನ್ನು ಲಪಟಾಯಿಸಿ ಮಹಾರಾಷ್ಟ್ರಕ್ಕೆ ಕೊಡಲು ಹೊರಟಿದ್ದಾರೆ. ಗಡಿ ವಿಚಾರದಲ್ಲಿ ಬಿಜೆಪಿ ನಾಯಕರು ಎರಡು ರೀತಿ ಮಾತನಾಡುತ್ತಿದ್ದಾರೆ. ಮುಂಬಯಿಗೆ ಹೋದರೆ ಒಂದು ರೀತಿ, ಬೆಂಗಳೂರಿಗೆ ಬಂದರೆ ಇನ್ನೊಂದು ರೀತಿ ಮಾತನಾಡುತ್ತಿದ್ದಾರೆ ಎಂದು ದೂರಿದರು.
ಬೆಳಗಾವಿ ಕರ್ನಾಟಕದ ಸ್ವತ್ತು, ನಮ್ಮ ಅವಿಭಾಜ್ಯ ಅಂಗ. ಇಲ್ಲಿ ಯಾವುದೇ ವಿವಾದ ಇಲ್ಲ. ನಮ್ಮ ಮುಖ್ಯಮಂತ್ರಿ ಪದೇ ಪದೆ ಬೆಳಗಾವಿ ವಿವಾದ ಅಂತ ಪದ ಬಳಸಿದ್ದಾರೆ. ತಕ್ಷಣವೇ ಅವರು ವಿವಾದ ಎನ್ನುವ ಪದವನ್ನು ವಾಪಸ್ ಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಒತ್ತಾಯಿಸಿದರು.
ಬೆಳಗಾವಿ ಇವತ್ತು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗಿದೆ. ಅಪಾರ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದೇವೆ. ಅಲ್ಲಿ ನೂರಾರು ಸಕ್ಕರೆ ಕಾರ್ಖಾನೆ ನಡೆಯುತ್ತಿದ್ದರೆ ಅದೆಲ್ಲ ಕರ್ನಾಟಕ ಕೊಟ್ಟಿರುವ ಕೊಡುಗೆ. ಮಹಾರಾಷ್ಟ್ರದ ರಾಜಕೀಯ ಪಕ್ಷಗಳು ಬೆಳಗಾವಿಯ ಆರ್ಥಿಕ ಶಕ್ತಿ ಗಮನಿಸಿ ಲಪಟಾಯಿಸಲು ಹೊರಟಿವೆ. ಉದ್ಧವ್ ಠಾಕ್ರೆಯ ಉದ್ದಟತನದ ಮಾತಿನ ಜಾಗಟೆಗೆ ರಾಜ್ಯ ಬಿಜೆಪಿ ಸರ್ಕಾರ ಡ್ರಮ್ ಹೊಡೆಯಲು ಹೊರಟಿದೆ ಎಂದು ಚಾಟಿ ಬೀಸಿದರು.
ಮಹಾರಾಷ್ಟ್ರ ಸರ್ಕಾರ ಜವಾಬ್ದಾರಿಯುತವಾಗಿ ವರ್ತಿಸಲಿ:ಈ ದೇಶದಲ್ಲಿ ಒಕ್ಕೂಟದ ವ್ಯವಸ್ಥೆ, ಪ್ರಜಾಪ್ರಭುತ್ವ, ಸಂವಿಧಾನದ ಗೌರವ ಕಾಪಾಡಬೇಕಾದರೆ ಮಹಾರಾಷ್ಟ್ರದ ಸರ್ಕಾರ ಜವಾಬ್ದಾರಿಯುತವಾಗಿ ನಡೆಯುವುದನ್ನು ಕಲಿಯಬೇಕು. ಅಕ್ಕಪಕ್ಕದ ರಾಜ್ಯದಲ್ಲಿ ದ್ವೇಷ ಉಂಟು ಮಾಡಿ, ಸಂಘರ್ಷ ಉಂಟು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಡಬಲ್ ಇಂಜಿನ್ ಸರ್ಕಾರ ಕರ್ನಾಟಕವನ್ನು ಲೆಕ್ಕಕ್ಕೆ ಇಟ್ಟಿಲ್ಲ: ದೆಹಲಿಯಲ್ಲಿ ಇವರ ಡಬಲ್ ಎಂಜಿನ್ ಸರ್ಕಾರ ಕರ್ನಾಟಕದವರನ್ನು ಲೆಕ್ಕಕ್ಕೆ ಇಟ್ಟಿಲ್ಲ. 25 ಜನ ಲೋಕಸಭಾ ಸದಸ್ಯರು ಇದ್ದಾರೆ. ಅವರನ್ನು ಮೋದಿ, ಅಮಿತ್ ಶಾ ಎಲ್ಲಿಟ್ಟಿದ್ದಾರೆ ಗೊತ್ತಿದೆ. ಧಮ್, ತಾಕತ್ ಬಗ್ಗೆ ಸಿಎಂ ಪ್ರತಿನಿತ್ಯ ಭಾಷಣ ಮಾಡ್ತಾರೆ. ಈ ವಿಷಯದಲ್ಲಿ ಧಮ್, ತಾಕತ್ ಅನ್ನು ಪ್ರಧಾನಿ ಹತ್ತಿರ ತೋರಿಸಿ ಬನ್ನಿ. ವೃಥಾ ಮಾತನಾಡುವುದನ್ನು ನಿಲ್ಲಿಸಿ. ಅಮಿತ್ ಶಾ ಅವರನ್ನು ಭೇಟಿಯಾಗಿ ನಿಮ್ಮ ಧಮ್, ತಾಕತ್ ಬಗ್ಗೆ ಹೇಳಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಟಾಂಗ್ ಕೊಟ್ಟರು.
ಇದನ್ನೂ ಓದಿ:ಮಾಳಿ-ಮಾಲಾಗಾರ ಸಮುದಾಯಕ್ಕೆ ನಿಗಮ ಮಂಡಳಿ ರಚನೆ: ಸಿಎಂ ಬೊಮ್ಮಾಯಿ