ಮಂಡ್ಯ: ಮೋದಿ ಎರಡು ಸಲ ಪ್ರಧಾನಿ ಆಗವ್ನೇ. ಆತ ಜನರಿಗೆ ಪ್ರತಿ ತಿಂಗಳು 2 ಸಾವಿರ ಕೊಟ್ಟಿದ್ದನ್ನ ದೊಡ್ಡದು ಅಂತಾರೆ. ಆದರೆ ನಾನು 14 ತಿಂಗಳ ಕಾಲ ಸಿಎಂ ಆಗಿದ್ದವನು. ಆಗಿನ ಸಮ್ಮಿಶ್ರ ಸರ್ಕಾರದಲ್ಲಿ 25 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದೆ ಇದು ದೊಡ್ಡದಲ್ಲವಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ನೇರಲಕೆರೆ ಗ್ರಾಮದಲ್ಲಿ 14 ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಮಸ್ತ ರೈತರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ನಾನು 2018ರ ಚುನಾವಣಾ ಪ್ರಚಾರದ ವೇಳೆ ಈ ಕುಡಿಯುವ ನೀರಿನ ಯೋಜನೆಗೆ ಇಲ್ಲಿಯ ಜನ ಬೇಡಿಕೆ ಇಟ್ಟಿದ್ರು. ಈ 14 ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆ ಈಗಾಗಲೇ ಉದ್ಘಾಟನೆ ಆಗಬೇಕಿತ್ತು. ಆದರೆ ಈ ಯೋಜನೆಗೆ ಇಂದು ಶಂಕುಸ್ಥಾಪನೆ ಮಾಡುವ ಪರಿಸ್ಥಿತಿ ಬಂದಿದೆ ಎಂದರು.
2018ರ ಚುನಾವಣೆಯಲ್ಲಿ ಏಳಕ್ಕೆ ಏಳು ಕ್ಷೇತ್ರ ಗೆಲ್ಲಿಸಿಕೂಟ್ಟಿದ್ದಿರಿ. ಅದರ ಭಾಗವಾಗಿ ದೆಹಲಿ ನಾಯಕರ ಬೆಂಬಲದಿಂದಾಗಿ ನಾನು ಸಿಎಂ ಕೂಡ ಆಗಿದ್ದೆ. 2018ರ ಬಜೆಟ್ನಲ್ಲಿ ಈ ಯೋಜನೆಗೆ ಅನುಮೋದನೆ ಕೊಟ್ಟಿದ್ದೆ. ಮಂಡ್ಯ ಜಿಲ್ಲೆಯ 9 ಸಾವಿರ ಕೋಟಿ ರೂಪಾಯಿ ಯೋಜನೆಗಳಿಗೆ ಚಾಲನೆ ಕೊಟ್ಟೆ. ಅದಕ್ಕೆ ಬಿಜೆಪಿಯವರು ಮಂಡ್ಯ ಜಿಲ್ಲೆ ಬಜೆಟ್ ಎಂದು ವಿಧಾನಸೌಧದಲ್ಲಿ ವ್ಯಂಗ್ಯವಾಡಿದ್ರು. ಆದರೆ ರಾಮನಗರ ಬಳಿಕ ನಾನು ನಂಬಿದ ಜಿಲ್ಲೆ ಮಂಡ್ಯ. ಇಲ್ಲಿಯ ಜನ ಒಮ್ಮೆ ಯಾರನ್ನಾದರೂ ನಂಬಿದ್ರೆ ಕೈ ಬಿಡುವವರಲ್ಲ ಎಂದರು.
ಓದಿ:ಶ್ರೀರಂಗಪಟ್ಟಣಕ್ಕೆ ಹೆಚ್ಡಿಕೆ ಆಗಮನ : ವಿವಿಧ ಕಾಮಗಾರಿಗೆಳಿಗೆ ಶಂಕು ಸ್ಥಾಪನೆ ನೆರವೇರಿಸಲಿರುವ ಮಾಜಿ ಸಿಎಂ
ಮಹಾರಾಜರು ಕಟ್ಟಿದ ಕಾರ್ಖಾನೆ ಮೈಷುಗರ್. ಈ ಇತಿಹಾಸ ಉಳ್ಳ ಕಾರ್ಖಾನೆಯನ್ನ ಖಾಸಗಿಯವರಿಗೆ ಕೊಡಲು ಬಿಜೆಪಿಯವರು ಹೊರಟ್ಟಿದ್ದಾರೆ. ನಾನು ಹೊಸ ಕಾರ್ಖಾನೆ ಮಾಡಲು ನೂರು ಕೋಟಿ ಇಟ್ಟಿದ್ದೆ. ಆ ಹಣವನ್ನು ಬೇರೊಂದಕ್ಕೆ ವರ್ಗಾಯಿಸಿದ್ದಾರೆ. ನಾವು ಬದುಕಿರೋದು ನಿಮ್ಮ ಜೊತೆಯಲ್ಲಿ. ನಮ್ಮ ಬಗ್ಗೆ ಅಪಪ್ರಚಾರ ಮಾಡೋರಿಗೆ ಕಿವಿಗೊಡಬೇಡಿ ಎಂದು ಹೆಚ್ಡಿಕೆ ಮನವಿ ಮಾಡಿದರು.