ಮಂಡ್ಯ:ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಎಚ್ ಎನ್ ಕಾವಲ್ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧ ಮರಗಳನ್ನು ಕಡಿಯುತ್ತಿದ್ದವರ ಮೇಲೆ ಅರಣ್ಯಾಧಿಕಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅಪ್ಪ ಹಾಗೂ ಇಬ್ಬರು ಮಕ್ಕಳ ಜೊತೆಗೆ ಇತರರು ಸೇರಿ ಶ್ರೀಗಂಧ ಕಳವಿಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ.
ಹಾಸನ ಜಿಲ್ಲೆ ಬೇಲೂರು ತಾಲೂಕು ಗೆಂಡೆಹಳ್ಳಿಯ ಗೋವಿಂದಪ್ಪ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ. ಗೋವಿಂದಪ್ಪನ ಮಕ್ಕಳಾದ ಶಂಕರ್ ಮತ್ತು ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಗುಂಡೇಟಿಗೆ ಒಳಗಾಗಿರುವ ಗೋವಿಂದಪ್ಪನನ್ನು ಎ.ಸಿ.ಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರ ಜೊತೆ ಬಂದಿದ್ದ ಇತರ ಆರೋಪಿಗಳು ಪರಾರಿಯಾಗಿದ್ದಾರೆ.
ಬುಧವಾರ ಸಂಜೆ ಅರಣ್ಯ ಪ್ರದೇಶಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ ಗೋವಿಂದಪ್ಪ, ಶಂಕರ, ಕುಮಾರ ಹಾಗೂ ಇನ್ನಿತರರು ಶ್ರೀಗಂಧಮರ ಕಡಿಯುವ ಪ್ರಯತ್ನದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಆಧರಿಸಿ ನಾಗಮಂಗಲ ಉಪ ವಲಯ ಅರಣ್ಯಾಧಿಕಾರಿ ಮಂಜು ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿದ್ದಾರೆ. ಅರಣ್ಯಾಧಿಕಾರಿಗಳು ದಾಳಿ ನಡೆಸಿದ ವೇಳೆ ಬೆಚ್ಚಿಬಿದ್ದ ಆರೋಪಿಗಳು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ತಪ್ಪಿಸಿಕೊಳ್ಳದಂತೆ ಅರಣ್ಯ ಇಲಾಖೆಯವರು ಸುತ್ತುವರಿದು, ಶರಣಾಗುವಂತೆ ಆರೋಪಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಲಾಗ್ತಿದೆ.