ಮಂಡ್ಯ: ಕೋವಿಡ್ 19 ಸಂದರ್ಭದಲ್ಲಿ ಸಾಂಕ್ರಮಿಕ ರೋಗದ ನಿಯಂತ್ರಣಕ್ಕಾಗಿ ದೇವರ ಬಳಿ ಹರಕೆ ಕಟ್ಟಿಕೊಂಡಿದ್ದ ಮಳವಳ್ಳಿ ಕ್ಷೇತ್ರದ ಶಾಸಕ ಡಾ ಕೆ ಅನ್ನದಾನಿ ಶನಿವಾರದಂದು ಹರಕೆ ತೀರಿಸಲು ಮಳವಳ್ಳಿಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಹೊರಟಿದ್ದಾರೆ. ಇನ್ನೂ ಮಳವಳ್ಳಿಯಿಂದ - ಮಾದಪ್ಪನ ಸನ್ನಿಧಿಗೆ ಸುಮಾರು 103 ಕಿ.ಮೀ ದೂರ ಇದ್ದು ಎರಡೂ ರಾತ್ರಿ, ಮೂರು ಹಗಲು ಪಾದಯಾತ್ರೆ ಇರುತ್ತದೆ ಎಂದು ಶಾಸಕರು ತಿಳಿಸಿದರು.
ಇನ್ನೂ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ.ಕೆ ಅನ್ನದಾನಿ, ‘‘2019ರಲ್ಲಿ ಯಾವುದೇ ಮದ್ದು ಇಲ್ಲದ ಕೊರೊನಾ ಸಾಂಕ್ರಮಿಕ ರೋಗ ದೇಶದೆಲ್ಲಡೆ ಹರಡಿತ್ತು, ರೋಗದಿಂದ ಮುಕ್ತರಾಗಲು ಎಲ್ಲರೂ ದೇವರ ಮೊರೆ ಹೋಗಿದ್ದೆವು. ಎಲ್ಲಾ ಧರ್ಮದವರು ದೇವರಲ್ಲಿ ಪ್ರಾರ್ಥಸಿಕೊಂಡಿದ್ದರು. ಹಾಗೇ ನಾವು ಕೂಡ ನಮ್ಮ ಮಳವಳ್ಳಿ ತಾಲೂಕಿನ ಮಾದೇಶ್ವರ, ಮಂಟೆ ಸ್ವಾಮಿ, ಸಿದ್ದಪ್ಪಾಜಿ ಹೀಗೆ ಜಾನಪದ ದೇವರುಗಳ ಮೊರೆ ಹೋಗಿದ್ದೆವು. ನಾನು ಮಾದಪ್ಪನ ಮೊರೆ ಹೋಗಿ ಕೊರೊನಾ ತಡೆಗಾಗಿ ಹರಕೆ ಮಾಡಿಕೊಂಡಿದ್ದೆ’’,
ಅದಕ್ಕಾಗಿ ಈಗ ಹರಕೆ ತೀರಿಸಲು ಮಳವಳ್ಳಿಯಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯತ್ರೆ ಮಾಡುತ್ತಿದ್ದೇನೆ, ಮೂರು ಹಗಲು ಎರಡೂ ರಾತ್ರಿ ಪಾದಯಾತ್ರೆ ಇರುತ್ತದೆ. ಅಲ್ಲಿ ತಲುಪಿದ ನಂತರ ವಿಶೇಷ ಪೂಜೆ ಸಲ್ಲಿಸಿ ಹರಕೆ ಅರ್ಪಿಸುತ್ತೇವೆ ಎಂದು ಶಾಸಕ ಅನ್ನದಾನಿ ತಿಳಿಸಿದರು. ಶಾಸಕರ ಪಾದಯಾತ್ರೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಸಹ ಕೈ ಜೋಡಿಸಿ ಅವರ ಜೊತೆ ಹೆಜ್ಜೆ ಹಾಕಿದರು.