ಮಂಡ್ಯ:ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆಆರ್ಎಸ್ ಒಳಹರಿವಿನ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದ್ದು, ಅಷ್ಟೇ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ಇದರಿಂದಾಗಿ ಶ್ರೀರಂಗಪಟ್ಟಣದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ವಿಶ್ವವಿಖ್ಯಾತ ಪಕ್ಷಿಧಾಮವನ್ನು ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧಿಸಲಾಗಿದ್ದು, ಕಾವೇರಿ ನದಿಯ ತಟದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಬಹುತೇಕ ಮುಳುಗಡೆಯಾಗಿರುವ ರಂಗನತಿಟ್ಟು, ಆತಂಕದಲ್ಲಿ ಪಕ್ಷಿ ಸಂಕುಲ: ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ನಿಷೇಧಿಸಿದ್ದು, ಪ್ರವಾಸಿಗರ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಹಲವು ದೇಗುಲಗಳು ಮುಳುಗಡೆಯಾಗಿವೆ. ಚೆಕ್ಪೊಸ್ಟ್ ಬಳಿಯ ಸಾಯಿ ಮಂದಿರ ಪ್ರವಾಹ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದೆ.