ಮಂಡ್ಯ :ಕೆಆರ್‌ಎಸ್‌ನಲ್ಲಿ ಒಂದೇ ಕುಟುಂಬದ ಐವರ ಬರ್ಬರ ಹತ್ಯೆಯಾಗಿದ್ದವರ ಶವಗಳ ಮರಣೋತ್ತರ ಪರೀಕ್ಷೆಯನ್ನು ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ನಡೆಸಿ ಸೋಮವಾರ ಗ್ರಾಮದಲ್ಲಿ ಐವರ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಗ್ರಾಮದಲ್ಲಿ ಮೃತರಾದ ಐವರ ಪಾರ್ಥಿವ ಶರೀರಗಳ ಮೆರವಣಿಗೆಗೆ ಗ್ರಾಮಸ್ಥರ ಮಹಾಪೂರ ಹರಿದು ಬಂದಿತ್ತು. ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಮಕ್ಕಳ ಸಾವಿಗೆ ಗ್ರಾಮಸ್ಥರು, ಸಂಬಂಧಿಕರು ಸೇರಿ ಊರಿಗೆ ಊರೇ ಕಂಬನಿ ಮಿಡಿದರು.
ಗುಜರಾತ್ನ ಲಂಬಾಣಿ ತಾಂಡದ ಭೋರಿ ಸಂಪ್ರದಾಯದಂತೆ ನಡೆದ ಮೃತರ ಅಂತ್ಯ ಸಂಸ್ಕಾರವನ್ನು ಗ್ರಾಮಸ್ಥರ ನೆರವಿನೊಂದಿಗೆ ಮಾಡಲಾಯಿತು. ಅಂತ್ಯ ಸಂಸ್ಕಾರದ ವೇಳೆ ಸ್ಥಳದಲ್ಲಿ ಕೆಆರ್‌ಎಸ್ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ನಿನ್ನೆ ಕೆಆರ್‌ಎಸ್ ಗ್ರಾಮದ ಬಜಾರ್ ಲೈನ್ನಲ್ಲಿ ಒಂದೇ ಕುಟುಂಬದ ಓರ್ವ ಮಹಿಳೆ ಸೇರಿ ನಾಲ್ವರು ಮಕ್ಕಳ ಬರ್ಬರ ಹತ್ಯೆಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಹಿನ್ನೆಲೆ :ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆಆರ್‌ಎಸ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಮಕ್ಕಳು ಸೇರಿದಂತೆ ಐವರನ್ನು ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ನಡೆದಿತ್ತು.
ಕೆಆರ್‌ಎಸ್ ಗ್ರಾಮದ ಬಜಾರ್ ಲೈನ್ ನಿವಾಸಿ ಗಂಗರಾಮ್ ಪತ್ನಿ ಲಕ್ಷ್ಮಿ(30), ಮಕ್ಕಳಾದ ರಾಜ್ (12) ಕೋಸಮಲ್ (7), ಕುನಾಲ್(5) ಹಾಗೂ ಅಣ್ಣನ ಮಗ ಗೋವಿಂದ್(12) ಎಂಬುವರು ಕೊಲೆಯಾಗಿದ್ದವರು.
ಗಂಗರಾಮ್ ಹಾಗೂ ಆತನ ಅಣ್ಣ ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಾಗಿದ್ದು, ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಗೂ ಹೋಗಿ ವ್ಯಾಪಾರ ಮಾಡುತ್ತಾರಂತೆ. ಒಮ್ಮೆ ವ್ಯಾಪಾರಕ್ಕೆಂದು ಮನೆಯಿಂದ ಹೋದರೆ ಹದಿನೈದು ದಿನದಿಂದ ಒಂದು ತಿಂಗಳು ವಾಪಸ್ ಬರುವುದಿಲ್ಲ. ಇನ್ನು ಗಂಗರಾಜ್ ಎರಡು ದಿನದ ಹಿಂದೆ ವ್ಯಾಪಾರಕ್ಕೆಂದು ಮನೆಯಿಂದ ಹೋಗಿದ್ರು.
ಹೀಗಾಗಿ, ಲಕ್ಷ್ಮಿ ಮಕ್ಕಳನ್ನು ನೋಡಿಕೊಂಡು ಮನೆಯಲ್ಲೇ ಇದ್ರು. ರಾತ್ರಿ ಎಲ್ಲರೂ ಮಲಗಿದ ಬಳಿಕ ಮನೆಗೆ ನುಗ್ಗಿರುವ ಹಂತಕರು ಹರಿತವಾದ ಮಾರಕಾಸ್ತ್ರಗಳಿಂದ ಐವರನ್ನು ಹತ್ಯೆ ಮಾಡಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಓದಿ:ಜಿಲ್ಲೆಯಲ್ಲಿ ಮಂಗನ ಖಾಯಿಲೆ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಕ್ರಮ : ಡಾ. ಸೆಲ್ವಮಣಿ