ಕರ್ನಾಟಕ

karnataka

ETV Bharat / state

ಸರ್ಕಾರಿ ಕಾರ್ಯಕ್ರಮದಲ್ಲಿ ರೌಡಿಶೀಟರ್ ಫೈಟರ್ ರವಿ: ಸಚಿವ ಗೋಪಾಲಯ್ಯ ಸಮರ್ಥನೆ ಹೀಗಿದೆ.. - ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ತಿರುಗೇಟು

ರೌಡಿಯೊಬ್ಬ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದ ಸಂಗತಿ ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಕಾಂಗ್ರೆಸ್‌ ನಾಯಕರು ಈ ವಿಚಾರವನ್ನಿಟ್ಟುಕೊಂಡು ಬಿಜೆಪಿ ವಿರುದ್ಧ ಟೀಕಾಸಮರ ನಡೆಸಿದ್ದರು. ಇದೀಗ ಇಂಥದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

Fighter Ravi in Government programe with Minister
ಸರ್ಕಾರಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರೌಡಿಶೀಟರ್ ಫೈಟರ್ ರವಿ

By

Published : Jan 8, 2023, 11:53 AM IST

Updated : Jan 8, 2023, 12:58 PM IST

ಸರ್ಕಾರಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರೌಡಿಶೀಟರ್ ಫೈಟರ್ ರವಿ

ಮಂಡ್ಯ:ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ನಡೆದ ಬಗರ್ ಹುಕುಂ ಸಾಗುವಳಿ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ರೌಡಿಶೀಟರ್ ಫೈಟರ್ ರವಿ ಕಾಣಿಸಿಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಫೈಟರ್ ರವಿ ಬಿಜೆಪಿ ಸೇರ್ಪಡೆ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದವು. ಇದರ ನಡುವೆ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಫೈಟರ್ ರವಿ ಸಚಿವ ಹಾಗೂ ಶಾಸಕರೊಂದಿಗೆ ಕಾಣಿಸಿಕೊಂಡಿರುವುದು ವಿವಾದಕ್ಕೆ ಪುಷ್ಟಿ ಕೊಟ್ಟಿದೆ.

ಜಿಲ್ಲಾಡಳಿತದ ವತಿಯಿಂದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಬಗುರ್ ಹುಕುಂ ಸಾಗುವಳಿ ಮಂಜೂರು ಪತ್ರ ವಿತರಣಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಶಾಸಕ ಸುರೇಶ್ ಗೌಡ ಕಾರ್ಯಕ್ರಮದಲ್ಲಿದ್ದರು. ಅವರ ಜೊತೆಗೆ ಫೈಟರ್ ರವಿ ಕೂಡ ವೇದಿಕೆ ಹಂಚಿಕೊಂಡಿದ್ದರು. ಜನಪ್ರತಿನಿಧಿ ಅಲ್ಲದಿದ್ದರೂ ಸರ್ಕಾರಿ ಕಾರ್ಯಕ್ರಮದಲ್ಲಿ ರೌಡಿಶೀಟರ್ ಎಂಬ ಕುಖ್ಯಾತಿ ಪಡೆದ ವ್ಯಕ್ತಿ ಭಾಗವಹಿಸಿದ್ದು ಹೇಗೆ?, ಭಾಗಿಯಾಗಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸೈಲೆಂಟ್​ ಸುನೀಲ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ನಾಯಕರು: ರೌಡಿ ಶೀಟರ್ ಸೈಲೆಂಟ್ ಸುನೀಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಾಚಾರ್, ಎನ್.ಆರ್.ರಮೇಶ್ ಸೇರಿದಂತೆ ಕೆಲ ಬಿಜೆಪಿ ನಾಯಕರು ಕೆಲ ದಿನಗಳ ಹಿಂದೆ ಭಾಗಿಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಇದನ್ನು ಟೀಕಿಸಿದ್ದ ಕಾಂಗ್ರೆಸ್, ರೌಡಿ ಶೀಟರ್​ನನ್ನು ತಮ್ಮ ಪಕ್ಷಕ್ಕೆ ಕರೆತರಲು ಬಿಜೆಪಿ ಹೊರಟಿದೆ ಎಂದು ಟೀಕಿಸಿತ್ತು. ಈ ವಿವಾದ ಕಾವೇರುತ್ತಿದ್ದಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ನಾಯಕರು ಸೈಲೆಂಟ್​ ಸುನೀಲ್​ ರೌಡಿ ಎನ್ನೋದು ಗೊತ್ತಿರಲಿಲ್ಲ ಎಂದು ಸಮರ್ಥನೆ ನೀಡಿದ್ದರು. ಸೆಲೆಂಟ್​ ಸುನೀಲ್​ನನ್ನು ಯಾವುದೇ ಕಾರಣಕ್ಕೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹಾಗೂ ನಳಿನ್​ ಕುಮಾರ್​ ಕಟೀಲ್​ ಹೇಳಿಕೆ ನೀಡಿದ್ದರು. ಆದರೆ ಮತ್ತೊಂದೆಡೆ ರೌಡಿಸಂ ಹಿನ್ನೆಲೆ ಇರುವ ಮಲ್ಲಿಕಾರ್ಜುನ್​ ಅಲಿಯಾಸ್​ ಫೈಟರ್​ ರವಿಯನ್ನು ಕಮಲ ಪಾಳಯಕ್ಕೆ ಸ್ವಾಗತಿಸಲಾಗಿತ್ತು.

ಕಾಂಗ್ರೆಸ್​ ಮುಖಂಡ ಎಂ.ಲಕ್ಷ್ಮಣ ಆರೋಪ: ಇದರ ಬೆನ್ನಲ್ಲೇ ಕಾಂಗ್ರೆಸ್​ ಮುಖಂಡ ಎಂ.ಲಕ್ಷ್ಮಣ ಅವರು ಅಂಕಿ-ಅಂಶಗಳೊಂದಿಗೆ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಬಿಜೆಪಿಯವರು ರೌಡಿ ಮೋರ್ಚಾ ಆರಂಭಿಸಿದ್ದು, ಬೆಂಗಳೂರಿನ ಪ್ರಮುಖ 60 ಮಂದಿ ರೌಡಿಗಳು ಈ ಮೋರ್ಚಾಗೆ ಸೇರ್ಪಡೆಯಾಗಲು ತಯಾರಾಗಿದ್ದಾರೆ. ಅದರಲ್ಲಿ ಮೊದಲ ಹಂತವಾಗಿ ಈಗಾಗಲೇ 36 ಮಂದಿ ಬಿಜೆಯನ್ನು ಸೇರಿಕೊಂಡಿದ್ದು, ಇನ್ನು 24 ರೌಡಿಗಳು ಸೇರ್ಪಡೆಯಾಗಲು ಬಾಕಿ ಇದೆ. ಇಡೀ ರಾಜ್ಯದಲ್ಲಿ 150 ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿಯವರು ನಿರ್ಧಾರ ಮಾಡಿದ್ದಾರೆ. ಇವರ ಟ್ರಿಕ್ಸ್​ ಏನೆಂದರೆ ರೌಡಿಗಳು ತಮ್ಮ ಹೆಸರು ಬದಲಾಯಿಸಿಕೊಂಡು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅದರಲ್ಲಿ ಈ ಫೈಟರ್​ ರವಿ ಕೂಡ ಒಬ್ಬನು ಎಂದು ಆರೋಪಿಸಿದ್ದರು.

ಅಧಿಕೃತವಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಫೈಟರ್​ ರವಿ ಪಡೆದಿದ್ದರೂ, ಬಿಜೆಪಿ ಮಾತ್ರ ಕಾಂಗ್ರೆಸ್​ ಮಾಡಿದ್ದ ಆರೋಪಕ್ಕೆ ಸಮರ್ಥನೆ ನೀಡಿತ್ತು. ಕಾಂಗ್ರೆಸ್​ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾವು ಯಾವುದೇ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಫೈಟರ್​ ರವಿ ಪಕ್ಷಕ್ಕೆ ಸೇರ್ಪಡೆ ಬಗ್ಗೆ ರಾಜ್ಯಾಧ್ಯಕ್ಷರೇ ಮಾತನಾಡುತ್ತಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ತಿರುಗೇಟು ನೀಡಿದ್ದರು.

ಸಚಿವ ಗೋಪಾಲಯ್ಯ ಸಮರ್ಥನೆ: ಈ ಹಿಂದೆ ಸೈಲೆಂಟ್ ಸುನೀಲ, ಫೈಟರ್ ರವಿ ಬಿಜೆಪಿ ಸೇರ್ಪಡೆ ವಿರೋಧ ಪಕ್ಷಗಳಿಗೆ ಆಹಾರವಾಗಿತ್ತು. ನಂತರ ರೌಡಿ ರಾಜಕೀಯ ಕೆಸರೆರಚಾಟ ರಾಜ್ಯ ರಾಜಕಾರಣದಲ್ಲಿ ವಾಗ್ಯುದ್ಧವನ್ನೇ ಸೃಷ್ಟಿಸಿತ್ತು. ಆ ವಿಷಯ ತಣ್ಣಗಾಗುತ್ತಿದ್ದ ವೇಳೆಯೇ ಫೈಟರ್ ರವಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿರೋದು ಮತ್ತಷ್ಟು ಸಂಚಲನ ಸೃಷ್ಟಿಸಿದೆ. ಅದಷ್ಟೇ ಅಲ್ಲ ಫೈಟರ್ ರವಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಚಾರವನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸಮರ್ಥಿಸಿಕೊಂಡಿದ್ದಾರೆ. 'ಜನರಿಗೆ ಅನುಕೂಲವಾಗುವ ಕಾರ್ಯಕ್ರಮವಿದು. ಅವರು ನಮ್ಮ ಸ್ನೇಹಿತರು. ಹಾಗಾಗಿ ಬಂದಿದ್ದಾರೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ:ರೌಡಿ ಶೀಟರ್ ವಿವಾದಕ್ಕೆ ತತ್ತರಿಸಿದ ಬಿಜೆಪಿ ನಾಯಕರು: ಸಮರ್ಥನೆ, ಸ್ಪಷ್ಟೀಕರಣದಿಂದ ಕೇಸರಿ ಪಡೆಯಲ್ಲಿ ಗೊಂದಲ

Last Updated : Jan 8, 2023, 12:58 PM IST

ABOUT THE AUTHOR

...view details