ಮಂಡ್ಯ: ಜಮೀನಿನಲ್ಲಿ ಬೆಳೆದಿದ್ದ ಮರ ಕಡಿದಿದ್ದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕು ಕೂಳಗೆರೆ ಗ್ರಾಮದಲ್ಲಿ ನಡೆದಿದೆ.
ಜಮೀನಲ್ಲಿದ್ದ ಮರ ಕಡಿದಿದ್ದಕ್ಕೆ ದೂರು: ಎರಡು ಕುಟುಂಬಗಳ ನಡುವೆ ಮಾರಾಮಾರಿ - Maddur Public Hospital
ಕೃಷಿ ಜಮೀನಿನಲ್ಲಿ ಮರ ಕಡಿದ ಬಗ್ಗೆ ಕೃಷಿ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎಂಬ ಕಾರಣಕ್ಕಾಗಿ ಗ್ರಾಮದ ಎರಡು ಕುಟುಂಬಗಳ ನಡುವೆ ಗಲಾಟೆ ತಾರಕಕ್ಕೇರಿ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಮಾರಕಾಸ್ತ್ರ ಹಿಡಿದು ಎರಡು ಕುಟುಂಬಗಳ ಸದಸ್ಯರು ಗಲಾಟೆ ಮಾಡಿದ್ದು, ಈ ವೇಳೆ ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಕೂಳಗೆರೆ ಗ್ರಾಮದ ಮಹೇಶ(35), ಮಹದೇವು(33) ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರಿಗೂ ಮಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ಗ್ರಾಮದ ಯೋಗೇಶ್, ಮುದ್ದುಮಾದೇಗೌಡ, ಮಲ್ಲರಾಜು ಎಂಬವರು ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿದ್ದು, ಕೃಷಿ ಜಮೀನಿನಲ್ಲಿ ಮರ ಕಡಿಯಲಾಗಿದೆ ಎಂದು ಕೃಷಿ ಇಲಾಖೆಗೆ ದೂರು ಸಲ್ಲಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.
ಇನ್ನೊಂದು ಕುಟುಂಬದ ಸದಸ್ಯರನ್ನ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎರಡೂ ಕುಟುಂಬದ ಸದಸ್ಯರು ಮಾರಕಾಸ್ತ್ರಗಳಿಂದ ಮಾರಾಮಾರಿ ನಡೆಸಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.