ಮಂಡ್ಯ : ಇಂದಿನ ಕಾಲದಲ್ಲಿ ಮಕ್ಕಳು ಅವರ ತಂದೆ ತಾಯಿ ತೋರಿದ ದಾರಿಯಲ್ಲಿ ನಡೆದರೆ ಅದೇ ದೊಡ್ಡ ಸಮಾಧಾನ. ಇನ್ನು ಮಕ್ಕಳು ಅಪ್ಪ ಮಾಡುತ್ತಿರುವ ವೃತ್ತಿಯನ್ನೇ ಹಿಡಿದು ಅವರು ನಿರ್ವಹಿಸಿದ ಹುದ್ದೆಗೇರಿದರೆ ಆ ಖುಷಿಗೆ ಪಾರವೇ ಇರುವುದಿಲ್ಲ. ಸದ್ಯ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಮಗಳು ತನ್ನ ತಂದೆಯಂತೆಯೇ ಪಿಎಸ್‌ಐ ಆಗಿದ್ದು ಮಾತ್ರವಲ್ಲದೆ, ಅವರಿಂದಲೇ ಹುದ್ದೆಯ ಜವಾಬ್ದಾರಿಯನ್ನು ಪಡೆದುಕೊಂಡಿರುವುದು ವಿಶೇಷವಾಗಿದೆ.
ಹೌದು, ತಂದೆ-ತಾಯಿಯ ವೃತ್ತಿಯನ್ನೇ ಮಕ್ಕಳು ಅನುಸರಿಸುವುದು ಸಹಜ. ಅದರಲ್ಲೂ ತನ್ನ ಹುದ್ದೆಯನ್ನು ಮೀರಿದ ಹುದ್ದೆಗೆ ಮಕ್ಕಳು ಹೋದಾಗ ಅಥವಾ ವೃತ್ತಿಯಲ್ಲಿ ಎದುರು-ಬದುರಾದಾಗ ಪೋಷಕರ ಸಂಭ್ರಮ ಹೇಳತೀರದು. ಇಂತಹದೊಂದು ಅಪರೂಪದ ಘಟನೆಗೆ ಮಂಡ್ಯ ಪೊಲೀಸ್ ಠಾಣೆ ಸಾಕ್ಷಿಯಾಗಿದೆ. ಇದೇ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಬಿ.ಎಸ್. ವೆಂಕಟೇಶ್ ಅವರು ತಾವು ನಿರ್ವಹಿಸುತ್ತಿದ್ದ ಹುದ್ದೆಯ ಚಾರ್ಜ್ ಅನ್ನು ತಮ್ಮ ಮಗಳು ಬಿ. ವಿ. ವರ್ಷಾ ಅವರಿಗೆ ಹಸ್ತಾಂತರಿಸಿದ್ದಾರೆ.
ಪಿಎಸ್‌ಐ ಬಿ.ಎಸ್. ವೆಂಕಟೇಶ್ ಅವರು ಎಸ್ಪಿ ಕಚೇರಿಗೆ ವರ್ಗಾವಣೆಯಾಗಿದ್ದಾರೆ. ಈ ಹುದ್ದೆಗೆ ಅವರ ಮಗಳು ಬಿ.ವಿ. ವರ್ಷಾ ಇದೀಗ ನೇಮಕಗೊಂಡಿದ್ದಾರೆ. ಪಿಎಸ್‌ಐ ಪರೀಕ್ಷೆಯಲ್ಲಿ ತೇರ್ಗಡೆಗೊಂಡ 2022ರ ಬ್ಯಾಚ್‌ನ ಪಿಎಸ್‌ಐ ಅಧಿಕಾರಿಯಾಗಿರುವ ವರ್ಷಾ ಅವರು ಕಲಬುರಗಿಯಲ್ಲಿ ತರಬೇತಿ ಮುಗಿಸಿ, ಮಂಡ್ಯದಲ್ಲೇ 1 ವರ್ಷ ಪ್ರೊಬೆಷನರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅದೃಷ್ಟವೆಂಬಂತೆ ತಂದೆ ಇದ್ದ ಹುದ್ದೆಗೆ ನೇಮಕವಾಗಿ ಅವರ ಮೊದಲ ಪೋಸ್ಟಿಂಗ್ ಕೂಡ ತನ್ನ ತಂದೆ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಗೆ ಆಗಿದೆ. ತಂದೆಯಿಂದಲೇ ಪಿಎಸ್‌ಐ ಚಾರ್ಜ್ ಪಡೆದುಕೊಂಡು ಪೊಲೀಸ್ ವೃತ್ತಿಜೀವನ ಆರಂಭಿಸಿದ್ದಾರೆ.
ಬಿ.ವಿ. ವರ್ಷಾ ಅವರು ಅರ್ಥಶಾಸ್ತ್ರದಲ್ಲಿ ಎಂಎ ಪದವಿಯನ್ನು ಪಡೆದಿದ್ದಾರೆ. ಸೈನಿಕರಾಗಿ ಸೇವೆ ಸಲ್ಲಿಸಿದ ವರ್ಷಾ ಅವರ ತಂದೆ ವೆಂಕಟೇಶ್ ತುಮಕೂರು ಜಿಲ್ಲೆಯ ಹುಲಿಯೂರು ದುರ್ಗದವರು. 16 ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ದೇಶದ ವಿವಿಧ ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸಿರುವುದರ ಜತೆಗೆ ಕಾರ್ಗಿಲ್ ಯುದ್ಧದಲ್ಲೂ ಭಾಗಿಯಾಗಿದ್ದ ಹೆಗ್ಗಳಿಕೆ ಇವರದು. ಮಿಲಿಟರಿ ಸೇವೆಯಿಂದ ನಿವೃತ್ತರಾದ ಬಳಿಕ ಪಿಎಸ್‌ಐ ಪರೀಕ್ಷೆ ಪಡೆದು ಮಿಲಿಟರಿ ಕೋಟಾದಡಿ 2021ರ ಬ್ಯಾಚ್‌ನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ 2ನೇ ವೃತ್ತಿ ಜೀವನ ಆರಂಭಿಸಿದ್ದರು.