ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಮತ್ತೆ ನೀರು ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ ಶ್ರೀರಂಗಪಟ್ಟಣದಲ್ಲಿ ರಸ್ತೆ ತಡೆ ನಡೆಸಿದರು. ನವ ದೆಹಲಿಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂದು ಸೂಚಿಸಿದ ಬೆನ್ನಲ್ಲೇ ರೈತ ಸಂಘದ ಆಶ್ರಯದಲ್ಲಿ ರೈತರು ಬೆಂಗಳೂರು – ಮೈಸೂರು ಹೆದ್ದಾರಿಗೆ ಇಳಿದು ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ವಾಹನ ಸಂಚಾರಕ್ಕೂ ಅಡ್ಡಿಪಡಿಸಿದರು.
ರಾಜ್ಯ ಸರ್ಕಾರ ರೈತರ ಹಿತ ಕಾಪಾಡುವ ದೃಢ ನಿರ್ಧಾರ ಮಾಡಬೇಕು ಸಮಿತಿಯ ಆದೇಶವನ್ನು ಧಿಕ್ಕರಿಸಬೇಕು, ಯಾವುದೇ ಕಾರಣಕ್ಕೂ ನೀರು ಹರಿಸಬಾರದು ಎಂದು ರೈತರು ಒತ್ತಾಯಿಸಿದರು. ಕಾವೇರಿಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನಿರಂತರ ನೀರು ಹರಿಸಿದ ಪರಿಣಾಮ ಕೆಆರ್ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಸದ್ಯಕ್ಕೆ ಕುಡಿಯುವ ನೀರಿಗೂ ಸಾಕಾಗುವುದಿಲ್ಲ. ವಾಸ್ತವ ಪರಿಸ್ಥಿತಿ ಪರಿಗಣಿಸದೇ ಏಕಾಏಕಿ ಮತ್ತೆ ನೀರು ಹರಿಸಿ ಎಂದಿರುವುದು ಅವೈಜ್ಞಾನಿಕ ಎಂದು ಕಿಡಿಕಾರಿದರು.
ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗಿದೆ, ಅಂದಾಜು 34 ಟಿಎಂಸಿ ನೀರು ಬಿಡಲಾಗಿದೆ, ಕರ್ನಾಟಕದ ಅಧಿಕಾರಗಳ ಮಾಹಿತಿ ನೀಡಿದರೂ ಸಹ ವಾಸ್ತವ ಪರಿಸ್ಥಿತಿ ತಿಳಿಯದೇ ನೀರು ಬಿಡುಗಡೆ ಮಾಡಿ ಎಂದು ಸೂಚಿಸಿರುವುದು ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕಾವೇರಿ ನದಿಗಿಳಿದು ರೈತರು ಹೋರಾಟ ನಡೆಸಿದರು.