ಮಂಡ್ಯ : ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತರು ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಇದೇ ವೇಳೆ ರೈತರು ಮುಖ್ಯಮಂತ್ರಿಗಳ ಪ್ರತಿಕೃತಿಯ ಮೆರವಣಿಗೆ ಮಾಡಿ, ದಹಿಸಿ ಆಕ್ರೋಶ ಹೊರಹಾಕಿದರು.
ಕಬ್ಬಿಗೆ 4500 ರೂ. ಬೆಲೆ ನಿಗದಿ ಪಡಿಸುವಂತೆ ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ. ನಿಗದಿಪಡಿಸುವಂತೆ ಒತ್ತಾಯಿಸಿ ಕಳೆದ 10 ದಿನಗಳಿಂದ ರೈತರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸದಿರುವುದನ್ನು ಖಂಡಿಸಿ, ರೈತಸಂಘದ ನೇತೃತ್ವದಲ್ಲಿ ಮಂಡ್ಯ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಇದೇ ವೇಳೆ ರೈತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಪ್ರತಿಭಟನಾ ರ್ಯಾಲಿಗೆ ನೂರಾರು ಸಂಖ್ಯೆಯಲ್ಲಿ ಟ್ರ್ಯಾಕ್ಟರ್, ಬೈಕ್ಗಳಲ್ಲಿ ರೈತರು ಆಗಮಿಸಿದ್ದರು. ಈ ಪ್ರತಿಭಟನೆಗೆ ಜಿಲ್ಲೆಯಾದ್ಯಂತ ರೈತರು ಸ್ವಯಂ ಪ್ರೇರಿತರಾಗಿ ಆಗಮಿಸಿ ಬೆಂಬಲ ಸೂಚಿಸಿದರು.