ಮಂಡ್ಯ : ಗಾಯದ ಮೇಲೆ ಬರೆ ಎಂಬಂತೆ ಮತ್ತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸಿಡಬ್ಲ್ಯೂಆರ್ಸಿ ಆದೇಶ ಮಾಡಿದೆ. ಇದು ಮತ್ತಷ್ಟು ಮಂಡ್ಯ ಜಿಲ್ಲೆಯ ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಇವತ್ತು ಸಕ್ಕರೆ ನಗರಿಯಲ್ಲಿ ಸಾಲು ಸಾಲು ವಿಭಿನ್ನ ವಿಶೇಷ ಪ್ರತಿಭಟನೆ ನಡೆದವು. ಇವತ್ತಿನ ಕಾವೇರಿ ಹೋರಾಟದಲ್ಲಿ ಸ್ವಾಮೀಜಿಗಳು ಸಹ ಪ್ರತಿಭಟನೆಗೆ ಸಾಥ್ ನೀಡಿದ್ರು.
ಹೌದು, ಜೀವನದಿ ಕಾವೇರಿ, ಜೀವನಾಡಿ ಕೆಆರ್ಎಸ್ ಜಲಾಶಯಕ್ಕಾಗಿ ಮಂಡ್ಯ ಜಿಲ್ಲೆಯ ಅನ್ನದಾತರು ಕಳೆದ ಹಲವು ದಿನಗಳಿಂದ ರಸ್ತೆಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಬಿಡುವುದಿಲ್ಲ ಎಂಬ ಕೂಗು ಹಾಕುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಂಬಂತೆ ಮತ್ತೆ ಸಿಡಬ್ಲ್ಯೂಆರ್ಸಿ ತಮಿಳುನಾಡಿಗೆ 18 ದಿನಗಳ ಕಾಲ ನೀರು ಹರಿಸುವಂತೆ ಆದೇಶ ಮಾಡಿದೆ. ಇದು ಜಿಲ್ಲೆಯ ಅನ್ನದಾತರು, ಹೋರಾಟಗಾರರನ್ನು ಕೆರಳುವಂತೆ ಮಾಡಿದೆ.
ಹೀಗಾಗಿ ಇವತ್ತು ಮಂಡ್ಯದಲ್ಲಿ ಸಾಲು ಸಾಲು ಪ್ರತಿಭಟನೆಗಳನ್ನು ನಡೆಸಿ ಆಕ್ರೋಶವನ್ನ ಹೊರಹಾಕಿದ್ರು. ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದ್ರು. ರಾಜ್ಯ ಸರ್ಕಾರ ಸಗಣಿ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಗಣಿ ನೀರು ಸುರಿದುಕೊಂಡು ಪ್ರತಿಭಟನೆ ನಡೆಸಿದರು. ಇದಕ್ಕೂ ಮೊದಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬೆಳೆಗಳನ್ನು ಬೆಳೆಯಲು ನೀರಿಲ್ಲ. ಹೀಗಾಗಿ ಕೊಳಚೆ ನೀರಲ್ಲಿ ಗಾಂಜಾ ಬೆಳೆಯಲು ಅವಕಾಶ ಕೊಡಿ, ಇಲ್ಲ ದಯಾಮರಣ ಕೊಡಿ ಎಂದು ಮನವಿ ಮಾಡಿದ್ರು. ಮತ್ತೊಂದು ಕಡೆ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಮಂಡ್ಯದ ಸಂಜಯ್ ಸರ್ಕಲ್ನಲ್ಲಿ ಹೆದ್ದಾರಿ ತಡೆ ನಡೆಸಿ, ರಕ್ತವನ್ನ ಕೊಟ್ಟೆವು ನೀರನ್ನ ಕೊಡುವುದಿಲ್ಲ ಎಂದು ಪ್ರತಿಭಟಿಸಿದರು.