ಮಂಡ್ಯ :ತಮಿಳುನಾಡಿಗೆ ಕಾವೇರಿಯಿಂದ ಹೆಚ್ಚುವರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಇಂದು ಜಿಲ್ಲೆಯಲ್ಲಿ ರೈತರು ಪ್ರತಿಭಟಿಸಿದ್ದಾರೆ. ಕಾವೇರಿಯಿಂದ ತಮ್ಮ ಪಾಲಿಗೆ ಬರಬೇಕಾದ ನೀರಿಗಾಗಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕಳೆದ ಹಲವು ದಿನಗಳಿಂದ ಕೆಆರ್ಎಸ್ ಜಲಾಶಯದಿಂದ ಕಾವೇರಿ ನದಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈ ಮಧ್ಯೆ ತಮಿಳುನಾಡು ಸರ್ಕಾರ ತಗಾದೆ ತೆಗೆದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೀಗಾಗಿ ಜಲಾಶಯದಿಂದ ಕಾವೇರಿಯ ಮೂಲಕ 12,718 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ನಿನ್ನೆ ಬೆಳಗ್ಗೆ 9 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಆದರೆ, ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದು ಹೆಚ್ಚುವರಿಯಾಗಿ 3 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಇದಕ್ಕೆ ರೈತರು ಪ್ರತಿಭಟನೆಯ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ರೈತರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಕೆಆರ್ಎಸ್ ಜಲಾಶಯ ಮಂಡ್ಯ ಜಿಲ್ಲೆಯ ರೈತರ ಜೀವನಾಡಿ. 124.80 ಅಡಿ ಗರಿಷ್ಠ ನೀರಿನ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 110.04 ಅಡಿ ನೀರು ಸಂಗ್ರಹವಿದೆ. ಟಿಎಂಸಿ ಲೆಕ್ಕದಲ್ಲಿ ಹೇಳುವುದಾದರೆ 49.452 ಸಂಗ್ರಹ ಸಾಮರ್ಥ್ಯವಿದ್ದು, ಸದ್ಯ 31.760 ಟಿಎಂಸಿ ನೀರಿದೆ. ಈ ಮಧ್ಯೆ ಜನ, ಜಾನುವಾರುಗಳು ಕುಡಿಯಲು, ಕೆಲವು ಬೆಳೆಗಳನ್ನು ಉಳಿಸಿಕೊಳ್ಳಲು ಕಟ್ ಪದ್ದತಿಯಂತೆ ನಾಲೆಗಳಿಗೆ ಹದಿನೈದು ದಿನ ನೀರು ಹರಿಸುವುದು ಮತ್ತು ನಂತರದ ಹದಿನೈದು ದಿನ ನೀರು ನಿಲ್ಲಿಸಲಾಗುತ್ತಿದೆ. ಅರೆ ಖುಷ್ಕಿ ಬೆಳೆಗಳನ್ನು ಮಾತ್ರ ಬೆಳೆಯುವಂತೆ ಈಗಾಗಲೇ ಕಾವೇರಿ ನೀರಾವರಿ ನಿಗಮ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡು ಹೆಚ್ಚುವರಿ ನೀರು ಕೇಳುತ್ತಿರುವುದು ರಾಜ್ಯ ಸರ್ಕಾರಕ್ಕೆ ಸಂಕಷ್ಟ ತಂದಿದೆ.