ಮಂಡ್ಯದಲ್ಲಿ ಮುಂದುವರಿದ ಕನ್ನಡ ಪರ, ರೈತ ಸಂಘಟನೆಗಳ ಪ್ರತಿಭಟನೆ ಮಂಡ್ಯ: ಕಾವೇರಿ ನೀರಿಗಾಗಿ ಮಂಡ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದು ಮತ್ತಷ್ಟು ತೀವ್ರಗೊಂಡಿದೆ. ಶ್ರೀರಂಗಪಟ್ಟಣದಲ್ಲಿಂದು ರೈತ ಸಂಘದ ವತಿಯಿಂದ ಹಣೆಗೆ ನಾಮ ಹಾಕಿಕೊಂಡು, ಜಾಗಟೆ ಬಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಯಿತು. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟು ಸರ್ಕಾರ ನಮಗೆ ನಾಮ ಹಾಕಿದೆ. ಕುಡಿಯಲು ನೀರಿಲ್ಲದಂತೆ ಮಾಡಿದೆ ಎಂದು ರೈತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗೋವಿಂದ, ಗೋವಿಂದ ನೀರು ಗೋವಿಂದ ಎಂದು ಜಾಗಟೆ ಬಾರಿಸುತ್ತ ಘೋಷಣೆ ಕೂಗುತ್ತಾ ಶ್ರೀರಂಗಪಟ್ಟಣದ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು. ಮತ್ತೊಂದೆಡೆ, ಮಂಡ್ಯದಲ್ಲಿ ರಾಜ್ಯ ರೈತ ಸಂಘದದಿಂದ ಕೆಆರ್ಎಸ್ ಡ್ಯಾಂಗೆ ಮುತ್ತಿಗೆ ಹಾಕಲಾಯಿತು. ನಂತರ ಕೆಆರ್ಎಸ್ನ ಪೊಲೀಸ್ ಠಾಣೆ ಬಳಿ ಜಮಾಯಿಸಿದ ರೈತ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಾಗಟೆ, ಬಾಂಕಿ ಬಾರಿಸುತ್ತ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರು.
ಮತ್ತೊಂದೆಡೆ, ರೈತರು ಇಂದು ಬೆಳಗ್ಗೆ ಕಾವೇರಿ ನದಿಗಿಳಿದು ಪ್ರತಿಭಟಿಸಿ, ನಂತರ ಕಾವೇರಿ ಮಾತೆಗೆ ಅಭಿಷೇಕ ಮಾಡಿದರು. ರೈತರ ಪ್ರತಿಭಟನೆಯೊಂದಿಗೆ ರಾಜ್ಯದ ಕನ್ನಡಪರ ಸಂಘಟನೆಗಳು ಕೈಜೋಡಿಸಿದ್ದು, ಶ್ರೀರಂಗಪಟ್ಟಣದ ಹನುಮಂತನಗರದಲ್ಲಿ ವಿನೂತನ ರೀತಿಯಲ್ಲಿ ನಡೆಸಿದ್ದಾರೆ. ಮಿನರಲ್ ವಾಟರ್‌ನಲ್ಲಿ ಭತ್ತದ ಪೈರು ನಾಟಿ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿದರು. ಅಲ್ಲದೇ, ಕೆಲ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಾವೇರಿ ನದಿಗಿಳಿದು, ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿದರು.
124.80 ಅಡಿ ಸಾಮರ್ಥ್ಯ ಹೊಂದಿರುವ ಕೆಆರ್ಎಸ್ ಜಲಾಶಯದಲ್ಲಿಗ ಕೇವಲ 99 ಅಡಿ ನೀರು ಮಾತ್ರ ಇದೆ. ಇಲ್ಲಿಯ ರೈತರಿಗೆ ಹೊಸ ಬೆಳೆ ಬೆಳೀಬೇಡಿ ಅಂತ ಹೇಳಿರೋ ಸರ್ಕಾರ ತಮಿಳುನಾಡಿಗೆ ನಿತ್ಯ ನೀರು ಕೊಡುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾದ್ಯಂತ ದಿನೇ ದಿನೇ ರೈತರ ಹೋರಾಟ ಹೆಚ್ಚಾಗಿದೆ. ಇನ್ನು ಪಾಂಡವಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ಸಿಎಂ ಹಾಗೂ ಡಿಸಿಎಂ ಭಾವಚಿತ್ರಕ್ಕೆ ದೊಣ್ಣೆಗಳಲ್ಲಿ ಚಪ್ಪಲಿ ಹೊಡೆದು ಆಕ್ರೋಶ ಹೊರಹಾಕಿದರು.
ಇನ್ನು ಕೆಆರ್ಎಸ್ನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಆಹೋರಾತ್ರಿ ಧರಣಿ ನಡೆಯುತ್ತಿದೆ. ಅಲ್ಲದೇ ಮುಂದೆ ಕಾನೂನು ಹೋರಾಟ ಮಾಡಲೂ ನಿರ್ಧರಿಸಿದೆ. ಒಟ್ಟಾರೆ ಜಿಲ್ಲಾದ್ಯಂತ ಕಾವೇರಿ ನೀರಿಗಾಗಿ ರೈತರು ಹೋರಾಟ ಮುಂದುವರೆಸಿದ್ದಾರೆ.
ಸಂಸದ ಪ್ರತಾಪ್ ಸಿಂಹ ಕಚೇರಿಗೆ ಮುತ್ತಿಗೆ ಹಾಕಿದ ರೈತರು: ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಕೇಂದ್ರ ಸರ್ಕಾರ ಮೇಲೆ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಒತ್ತಡ ಹೇರಬೇಕು ಎಂದು ಆಗ್ರಹಿಸಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಸಂಸದ ಪ್ರತಾಪ್ ಸಿಂಹರ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು. ರಾಜ್ಯದ ರೈತರನ್ನ ಬಲಿಕೊಟ್ಟಿರುವ ರಾಜ್ಯ ಸರ್ಕಾರ ಕೂಡಲೇ ಜಲಾಶಯದಿಂದ ತಮಿಳುನಾಡಿಗೆ ಬಿಡುತ್ತಿರುವ ನೀರು ನಿಲ್ಲಿಸಬೇಕು. ಕಾವೇರಿ ನದಿಯ ಹೆಚ್ಚುವರಿ ನೀರನ್ನು ಸಂಕಷ್ಟ ಕಾಲದಲ್ಲಿ ಬಳಸಿಕೊಳ್ಳಲು ಮೇಕೆದಾಟು ಜಲಾಶಯ ಯೋಜನೆ ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಕೆಡಿಪಿ ಸಭೆಯಲ್ಲಿ ಸಚಿವರು - ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ: ಅತಿರೇಕಕ್ಕೇರಿದ ಬಳಿಕ ಪೊಲೀಸರ ಮಧ್ಯಸ್ಥಿಕೆ