ಮಂಡ್ಯ: ಕೊರೊನಾ ರೈತರಿಗೆ ಸಂಕಷ್ಟ ತಂದಿಟ್ಟಿದೆ. ಜಿಲ್ಲಾಡಳಿತ ರೈತರ ಬೆಳೆಗಳ ಸಾಗಾಣಿಕೆಗೆ ಅವಕಾಶ ನೀಡಿದರೂ ಬೆಳೆ ಕೊಳ್ಳುವವರು ಇಲ್ಲದೆ ರೈತರು ತಲೆಗೆ ಕೈಇಟ್ಟು ಕುಳಿತಿದ್ದಾರೆ.
ಸಾಲ ಮಾಡಿ ಬೆಳೆದ ಬೆಳೆ ಬಿಸಿಲ ಬೇಗೆಗೆ ಸುಟ್ಟು ಹೋಗುತ್ತಿದ್ದು, ರೈತರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಬೆಳೆ ಕೊಳ್ಳುವವರು ಯಾರೂ ಇಲ್ಲದೆ ಕುಟುಂಬಗಳು ಆತಂಕಗೊಂಡಿವೆ.
ಪಾಂಡವಪುರ ತಾಲ್ಲೂಕಿನ ಬನಘಟ್ಟ ಗ್ರಾಮದ ರೈತ ಮಹಿಳೆ ನಿಂಗಮ್ಮ ಎಂಬವರು ತಮ್ಮ ಎರಡೂವರೆ ಎಕರೆ ಭೂಮಿಯಲ್ಲಿ ದಪ್ಪ ಮೆಣಸಿನಕಾಯಿ ಬೆಳೆ ಬೆಳೆದಿದ್ದರು. ಕಾಯಿ ಕುಯ್ಲಿಗೆ ಬಂದರೂ ಕೊಳ್ಳುವವರು ಯಾರೂ ಇಲ್ಲದೆ ಕುಟುಂಬ ಆತಂಕಕ್ಕೆ ಒಳಗಾಗಿದೆ. ಜಮೀನಿಗೆ ಹನಿ ನೀರಾವರಿ ಮಾಡಿಸಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮೆಣಸಿನಕಾಯಿ ಬೆಳೆದಿದ್ದು ಈಗ ಮಾರಾಟವಾಗದೆ ಸಾಲದ ಸುಳಿಗೆ ಸಿಲುಕಿದ್ದಾರೆ ಈ ರೈತ ಮಹಿಳೆ.
ಬೆಳೆ ಬೆಳೆಯಲು 5 ಲಕ್ಷ ರೂಪಾಯಿ ವೆಚ್ಚವಾಗಿದೆ ಎನ್ನುತ್ತಿದೆ ರೈತ ಕುಟುಂಬ. ಬೆಳೆ ಬಂದರೂ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಮೆಣಸಿನಕಾಯಿ ಬಿಸಿಲ ಝಳಕ್ಕೆ ಒಣಗಿ ಹೋಗುತ್ತಿವೆ. ಮಾರಾಟವೂ ಆಗದೆ, ಸಾಗಾಣಿಕೆ ಮಾಡಲೂ ಆಗದೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿರುವ ಕುಟುಂಬ, ಈಗ ಸಹಾಯಕ್ಕಾಗಿ ಅಂಗಲಾಚುತ್ತಿದೆ.
ಜಿಲ್ಲಾಡಳಿತ ಈಗಲಾದರೂ ರೈತರ ಸಂಕಷ್ಟ ನಿವಾರಣೆಗೆ ಮುಂದಾಗಬೇಕಾಗಿದೆ. ಸಾಲದ ಸುಳಿಗೆ ಸಿಲುಕುತ್ತಿರುವ ಕುಟುಂಬಗಳಿಗೆ ನೆರವು ನೀಡಲು ಮಾರಾಟ ಕೇಂದ್ರಗಳನ್ನು ಪ್ರಾರಂಭ ಮಾಡಬೇಕಾಗಿದೆ.