ಮಂಡ್ಯ:ಕಬ್ಬಿನ ದರ ಏರಿಕೆ ಮಾಡಲು, ಭೂ ಸುಧಾರಣೆ ಕಾಯ್ದೆ ಹಿಂಪಡೆಯಲು, ಮೈ ಶುಗರ್ ಕಾರ್ಖಾನೆ ಸರ್ಕಾರದ ಒಡೆತನದಲ್ಲೇ ಪ್ರಾರಂಭಕ್ಕೆ ಒತ್ತಾಯಿಸಿ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕಂದಾಯ ಸಚಿವ ಆರ್.ಅಶೋಕ್ ಅವರ ಕಾರನ್ನು ತಡೆದು ಸೋಮವಾರ ಸಂಜೆ ಪ್ರತಿಭಟನೆ ನಡೆಸಿದ್ದಾರೆ.
ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವರ ದರ್ಶನ ಪಡೆಯಲು ಆರ್.ಅಶೋಕ್ ಆಗಮಿಸಿದ್ದ ವೇಳೆ ಪ್ರತಿಭಟನಾಕಾರರು ದೇವಾಲಯದ ಮುಂಭಾಗ ಸೇರಿ ಧರಣಿ ಕುಳಿತು ಮನವಿ ಸಲ್ಲಿಸಲು ಮುಂದಾಗಿದ್ದರು. ಈ ವೇಳೆ ರೈತರ ಧರಣಿ ಗಮನಿಸದ ಆರ್. ಅಶೋಕ್ ತೆರಳುತ್ತಿದ್ದ ವೇಳೆ ಕಾರನ್ನು ಅಡ್ಡಗಟ್ಟಿ, ಕಾರಿನ ಗೂಟ ಮುರಿಯಲು ಯತ್ನಿಸಿದರು. ಕಾರಿನ ಮುಂದೆ ಮಲಗಿ ಆರ್.ಅಶೋಕ್ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ರೈತ ಸಂಘದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರು ರೈತರನ್ನು ಕೊಲೆ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ಡೌನ್ ಡೌನ್ ಎಂದು ಘೋಷಣೆ ಕೂಗಿದರೆ ಬಿಜೆಪಿ ಕಾರ್ಯಕರ್ತರು ಬಿಜೆಪಿ ಸರ್ಕಾರ, ಆರ್.ಅಶೋಕ್ ಪರ ಘೋಷಣೆ ಕೂಗುವ ಮೂಲಕ ಸಮರ್ಥಿಸಿಕೊಂಡರು.
ಸಮಸ್ಯೆಗಳನ್ನು ಆಲಿಸಿದ ಆರ್.ಅಶೋಕ್, ಅಕ್ಟೋಬರ್ 6ರಂದು ಮುಖ್ಯಮಂತ್ರಿಗಳು ಈ ಭಾಗಕ್ಕೆ ಆಗಮಿಸುತ್ತಿದ್ದಾರೆ. ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವುದಾಗಿ ತಿಳಿಸಿ ಪ್ರತಿಭಟನಾಕಾರರ ವಿರೋಧದ ನಡುವೆಯೂ ತೆರಳಿದರು.
ಇದನ್ನೂ ಓದಿ:ಇಂದಿನಿಂದ ಗುರುವಾರ ಮಧ್ಯಾಹ್ನದವರೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿಷೇಧ