ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮಂಡ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದವು. ಕಳೆದ 28 ದಿನಗಳಿಂದಲೂ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಗೆ ಪ್ರತಿದಿನ ಹಲವಾರು ಸಂಘಟನೆಗಳು ಬೆಂಬಲ ನೀಡುತ್ತಲೇ ಬಂದಿವೆ. ಇಂದೂ ಕೂಡ ಹಲವು ಸಂಘಟನೆಗಳು ಬೆಂಬಲ ಸೂಚಿಸಿರುವುದರ ಜೊತೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್.ಅಶೋಕ್ ಸೇರಿದಂತೆ ಹಲವರು ಖುದ್ದು ಧರಣಿ ಸ್ಥಳಕ್ಕೆ ಬಂದು ತಮ್ಮ ಬೆಂಬಲ ಸೂಚಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವು ಧರಣಿಗೆ ಮಂಡ್ಯದ ಶಿಕ್ಷಕರು ಹಾಗೂ ಬಿಡದಿ ಮಠದ ಚನ್ನಕೇಶವನಂದ ಸ್ವಾಮೀಜಿ ಸಾಥ್ ನೀಡಿದರು. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿಯಿಂದ ನಡೆದ ಧರಣಿಯಲ್ಲಿ ಕೈಯಲ್ಲಿ ಚೊಂಬು, ಬೇವು-ಬೆಲ್ಲ ಹಿಡಿದು ಕಿವಿಯಲ್ಲಿ ಹೂ ಇಟ್ಟುಕೊಂಡು ವಿಭಿನ್ನವಾಗಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರವನ್ನು ಪ್ರತಿಭಟನಾಕಾರರು ಅಣಕಿಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸರ್ಕಾರ ಕಾವೇರಿ ವಿಷಯದಲ್ಲಿ ಮೊದಲಿನಿಂದಲೂ ಎಡವಟ್ಟು ಮಾಡಿಕೊಂಡಿದೆ. ತಮಿಳುನಾಡು ಅರ್ಜಿ ಹಾಕಿದ ನಂತರ ಇವರು ಅರ್ಜಿ ಹಾಕಲು ಮುಂದಾಗ್ತಾರೆ. ಈವರೆಗೆ ಯಾವುದೇ ಒಂದು ದೃಢ ನಿಲುವು ತೆಗೆದುಕೊಳ್ಳುತ್ತಿಲ್ಲ. ನಾವು ಸದಾ ಅನ್ನದಾತರ ಜೊತೆ ಇರ್ತೀವಿ. ಶಿವಮೊಗ್ಗ ಗಲಭೆ ವಿಚಾರವಾಗಿ ಮಾತನಾಡಿ, ಪರಮೇಶ್ವರ್ ಹೇಳಿಕೆ ಕೋಮು ಗಲಭೆಗೆ ಕುಮ್ಮಕ್ಕು ಕೊಡುವಂತೆ ಇದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಇದೇ ಸಾಕ್ಷಿ ಎಂದರು.