ಮಂಡ್ಯ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಯುವ ರೈತನೊಬ್ಬ ಮೃತಪಟ್ಟಿರುವ ಘಟನೆ ಕೆ ಆರ್ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೆಳತೂರು ಗ್ರಾಮದ ಬಳಿಯಲ್ಲಿ ನಡೆದಿದೆ. ರವಿಕುಮಾರ್(43) ಮೃತರು.
ರವಿಕುಮಾರ್ ರಾಜೇನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಗುರುವಾರ ಮಧ್ಯಾಹ್ನ ಕಟ್ಟೆಕ್ಯಾತನಹಳ್ಳಿಯ ಬೆಳತೂರು ಬಳಿ ಇರುವ ತಮ್ಮ ಜಮೀನಿನಲ್ಲಿ ಹುಲ್ಲು ಕೊಯ್ಯಲು ತೆರಳಿದ್ದರು. ಆಗ ಟಿಸಿಯಿಂದ ತುಂಡಾಗಿ ಬಿದಿದ್ದ ವಿದ್ಯುತ್ ತಂತಿಯನ್ನು ಗಮನಿಸದೇ ಬದುವಿನ ಮೇಲೆ ತೆರಳಿದ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ರವಿಕುಮಾರ್ ಸಾವನ್ನಪ್ಪಿದ್ದರು.
ಸಂಜೆಯಾದರೂ ಮನೆಗೆ ಬಾರದ ರವಿಕುಮಾರ್ ಅವರನ್ನು ಹುಡುಕಿಕೊಂಡು ಅವರ ಭಾವಮೈದುನ ಜಮೀನಿನ ಬಳಿ ಬಂದಿದ್ದರು. ಈ ವೇಳೆ ರವಿಕುಮಾರ್ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿಕುಮಾರ್ ಸಾವಿಗೆ ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಹಾಗೂ ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ.
ಇದನ್ನೂ ಓದಿ:ಟೋಲ್ ಗೇಟ್ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ: ಸಿಸಿ ಕ್ಯಾಮರಾದಲ್ಲಿ ಭಯಾನಕ ದೃಶ್ಯ ಸೆರೆ
ಬೈಕ್ ಅಪಘಾತದಲ್ಲಿ ವಿದ್ಯಾರ್ಥಿ ಸಾವು( ದಕ್ಷಿಣ ಕನ್ನಡ):ಮತ್ತೊಂದೆಡೆ, ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಗಂಡಿಯಲ್ಲಿ ನಡೆದಿದೆ. ಧರ್ಮಸ್ಥಳ ಗ್ರಾಮದ ನೇತ್ರಾವತಿ ನಿವಾಸಿ ದಿಕ್ಷೀತ್(20) ಮೃತ ವಿದ್ಯಾರ್ಥಿ.
ಕಾಲೇಜಿನಲ್ಲಿ ಕಾರ್ಯಕ್ರಮ ಇದ್ದ ಕಾರಣ ಮಧ್ಯಾಹ್ನ ಊಟ ಮಾಡಿ, ಸ್ಟ್ಯಾಂಡ್ ತೆಗೆಯದೇ ಬೈಕ್ ಚಲಾಯಿಸಿಕೊಂಡು ಬರುವಾಗ ಉಜಿರೆಯ ಕಾಲೇಜು ರಸ್ತೆಯಲ್ಲಿ ಡಿವೈಡರ್ಗೆ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವು( ಚಿಕ್ಕಮಗಳೂರು):ಇತ್ತೀಚಿಗೆ, ಲಾರಿಯೊಂದು ಬೈಕ್ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಪಟ್ಟಣದಲ್ಲಿ ನಡೆದಿತ್ತು. ಮೃತ ವ್ಯಕ್ತಿಯನ್ನು ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಮಂಜುನಾಥ್ (35) ಎಂದು ಗುರುತಿಸಲಾಗಿತ್ತು.
ಮಂಜುನಾಥ್ ತನ್ನ ತಂದೆ ರಾಮು ಅವರೊಂದಿಗೆ ಬೈಕಿನಲ್ಲಿ ಸಕಲೇಶಪುರ ತಾಲೂಕಿನ ಹಾನು ಬಾಳು ಗ್ರಾಮದ ಸಂಬಂಧಿಕರ ಮನೆಗೆ ತೆರಳಿ ರಾತ್ರಿ ಊರಿಗೆ ವಾಪಸಾಗುತ್ತಿದ್ದರು. 10.30ರ ಸುಮಾರಿಗೆ ತರಕಾರಿ ತುಂಬಿಕೊಂಡು ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ, ಬಿದರಹಳ್ಳಿ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದರು.