20ಕ್ಕೂ ಹೆಚ್ಚು ಎಕರೆ ಕಬ್ಬು ಬೆಂಕಿಯಿಂದ ಸುಟ್ಟು ಭಸ್ಮ ಮಂಡ್ಯ :ಕಬ್ಬಿನ ಗದ್ದೆಗೆ ಬಿದ್ದ ಬೆಂಕಿಯನ್ನು ನಂದಿಸಲು ಯತ್ನಿಸಿದ ರೈತ ಸಜೀವ ದಹನವಾದ ದುರಂತ ಘಟನೆ ಮಂಡ್ಯ ಜಿಲ್ಲೆಯ ಮೊಡಚಾಕನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಗ್ರಾಮದ ಮಹಾಲಿಂಗಯ್ಯ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನವಾಗಿರುವ ರೈತ. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಎಕರೆ ಕಬ್ಬು ಬೆಂಕಿಯಿಂದ ಸುಟ್ಟು ಭಸ್ಮವಾಗಿದೆ.
ಬೆಂಕಿ ಆರಿಸಲು ಗದ್ದೆಗೆ ನುಗ್ಗಿದ ರೈತ ಸಜೀವದಹನ.. ಭಾನುವಾರ ಮಧ್ಯಾಹ್ನ ಕಬ್ಬಿನ ಗದ್ದೆಯ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಕೆಲವೇ ನಿಮಿಷಗಳಲ್ಲಿ ಇಡೀ ಜಮೀನಿಗೆ ವ್ಯಾಪಿಸಿದ ಬೆಂಕಿಯು ಅಕ್ಕ ಪಕ್ಕದ ಗದ್ದೆಗಳಿಗೂ ಹರಡಿತ್ತು. ಇನ್ನು, ದಟ್ಟ ಹೊಗೆ ನೋಡಿದ ಗ್ರಾಮಸ್ಥರು ಗಾಬರಿಗೊಂಡು ಜಮೀನು ಬಳಿಗೆ ಧಾವಿಸಿದ್ದು, ತಕ್ಷಣ ಅಲ್ಲೇ ಸ್ಥಳದಲ್ಲಿ ಸಿಕ್ಕ ಮಣ್ಣು, ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದರು. ಅಷ್ಟೊತ್ತಿಗೆ 20 ಎಕರೆಗೂ ಹೆಚ್ಚು ಕಬ್ಬಿಗೆ ಬೆಂಕಿ ವ್ಯಾಪಿಸಿತ್ತು. ಗ್ರಾಮಸ್ಥರು ಎಲ್ಲರೂ ಒಂದು ಕಡೆ ಬೆಂಕಿ ನಂದಿಸುತ್ತಿದ್ದರು. ಮತ್ತೊಂದು ಕಡೆ ಮೃತ ರೈತ ಮಹಾಲಿಂಗಯ್ಯ ಅವರು ಬೆಂಕಿ ನಂದಿಸಲು ಕಬ್ಬಿನ ಗದ್ದೆ ಒಳಗೆ ತೆರಳಿದ್ದಾರೆ. ಈ ವೇಳೆ ದಟ್ಟ ಹೋಗೆ ಆವರಿಸಿ ಮತ್ತು ಬೆಂಕಿ ಹೆಚ್ಚದ ಕಾರಣ ಮಹಾಲಿಂಗಯ್ಯ ಹೊರ ಬರದೆ ಬೆಂಕಿಗೆ ಸಿಲುಕಿ ಸಜೀವ ದಹನವಾಗಿದ್ದಾರೆ.
ಶೇ 90 ಭಾಗ ಮೃತ ಮಹಾಲಿಂಗಯ್ಯ ಅವರ ಮೃತದೇಹ ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಮೊದಲು ವ್ಯಕ್ತಿ ಯಾರೆಂಬುದು ಗ್ರಾಮಸ್ಥರಿಗೆ ತಿಳಿದಿರಲಿಲ್ಲ. ನಂತರ ಬೆಂಕಿ ನಂದಿಸಲು ಅಲ್ಲೇ ಪಕ್ಕದ ಜಮೀನಿನಲ್ಲಿ ಕುರಿ-ಆಡು ಮೇಯಿಸುತ್ತಿದ್ದ ಮಹಾಲಿಂಗಯ್ಯ ಎಲ್ಲಿ ಎಂದು ಹುಡುಕಿದಾಗ ಬೆಂಕಿಯಲ್ಲಿ ಸಿಲುಕಿ ಪ್ರಾಣ ಬಿಟ್ಟಿರುವುದು ಇವರೆ ಅನ್ನೋದು ಗೊತ್ತಾಗಿದೆ. ಈ ಘಟನೆಯಲ್ಲಿ ಮಹೇಶ್ ಎಂಬುವರ 8 ಎಕರೆ, ಜವರೇಗೌಡ ಎಂಬುವರ 1.5 ಎಕರೆ, ಪಾಪಣ್ಣ ಎಂಬುವರ 2 ಎಕರೆ, ಶಂಕರ್ ಎಂಬುವರ 1 ಎಕರೆ ಕಬ್ಬು ಭಸ್ಮವಾಗಿದೆ. ಮಹೇಶ್ ಅವರ ಒಂದೂವರೆ ಎಕರೆ ಬಾಳೆ ತೋಟವೂ ಬೆಂಕಿಗಾಹುತಿಯಾಗಿದೆ.
ಶಾಸಕರಿಂದ ವೈಯಕ್ತಿಕ ನೆರವು ಭರವಸೆ :ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಶಾಸಕ ಸಿ.ಎಸ್. ಪುಟ್ಟರಾಜು ಭೇಟಿ ನೀಡಿ ಘಟನೆ ಬಗ್ಗೆ ಸ್ಥಳೀಯರು, ಪೊಲೀಸರಿಂದ ಮಾಹಿತಿ ಪಡೆದಕೊಂಡರು. ಬಳಿಕ ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಮೃತ ರೈತನ ಕುಟುಂಬಕ್ಕೆ ಶಾಸಕರಿಂದ ವೈಯಕ್ತಿಕ ನೆರವಿನಲ್ಲಿ ಎರಡು ಹಸು ಕೊಡಿಸುವ ಮತ್ತು ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಕೊಡಿಸುವ ಭರವಸೆಯನ್ನು ಶಾಸಕ ಸಿ.ಎಸ್.ಪುಟ್ಟರಾಜು ನೀಡಿದರು.
ಇದನ್ನೂ ಓದಿ :ಒಂದೇ ವರ್ಷದಲ್ಲಿ 3 ಮಕ್ಕಳ ಸಾವು, ಹೆಗಲಿಗೆ ಬಿತ್ತು ಸೊಸೆ-ಮೊಮ್ಮಕ್ಕಳ ಜವಾಬ್ದಾರಿ: ಮನೆಗಾಗಿ ವೃದ್ಧೆಯ ಅಳಲು