ಮಂಡ್ಯ: ಪಿಎಸ್‌ಐ ಸಮವಸ್ತ್ರ ಧರಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ ಒಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿ ಜರುಗಿದೆ. ಕೆ.ಎಂ.ದೊಡ್ಡಿಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರಿನ ಗೊಟ್ಟಿಗೆರೆ ನಿವಾಸಿ ಸಂಜಯ್ ಬಂಧಿತ ಆರೋಪಿ. ಸಂಜಯ್ ಪಿಎಸ್‌ಐ ಸಮವಸ್ತ್ರ ಧರಿಸಿ ಕೆಎಂ ದೊಡ್ಡಿ ಸುತ್ತಮುತ್ತ ದ್ವಿಚಕ್ರ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದ. ಬಳಿಕ ಸಂಚಾರಿ ನಿಯಮ ಉಲ್ಲಂಘನೆಯಾಗಿದೆ ಎಂದು ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ.
ನಕಲಿ ಪೊಲೀಸ್ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದರ ಬಗ್ಗೆ ಸ್ಥಳೀಯರು ಕೆಎಂ ದೊಡ್ಡಿ ಠಾಣೆಯ ಇನ್ಸ್ಪೆಕ್ಟರ್ ಆನಂದ್‌ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಎಚ್ಚೆತ್ತ ಕೆಎಂ ದೊಡ್ಡಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಸಂಜಯ್ ಪಿಎಸ್ಐ ಸಮವಸ್ತ್ರದಲ್ಲಿ ಇರುವಾಗಲೇ ಹಿಡಿದು ವಿಚಾರಣೆ ಮಾಡಿದಾಗ ತಾನೊಬ್ಬ ನಕಲಿ ಪೊಲೀಸ್ ಎಂದು ತಪೊಪ್ಪಿಕೊಂಡಿದ್ದಾನೆ. ಆರೋಪಿ ಸಂಜಯ್‌ಗೆ ವಾರ್ನ್ ಮಾಡಲಾಗಿದ್ದು, ಕೋರ್ಟ್ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ.
ಹುಬ್ಬಳ್ಳಿ: ನಕಲಿ ದಾಖಲೆ ಸೃಷ್ಟಿಸಿ ರೈಲ್ವೇ ನೌಕರಿ ಪಡೆದ ಪ್ರಕರಣ..ನಕಲಿ ದಾಖಲೆ ಸೃಷ್ಟಿಸಿ ರೈಲ್ವೆ ನೌಕರಿ ಪಡೆದಿರುವ ಪ್ರಕರಣ 32 ವರ್ಷಗಳ ನಂತರ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶ ಮೂಲದ ವ್ಯಕ್ತಿ ಪರಿಶಿಷ್ಟ ವರ್ಗದ ವಾಲ್ಮೀಕಿ ಸಮುದಾಯದ ನಕಲಿ ಪ್ರಮಾಣಪತ್ರ ಪಡೆದು ನೈರುತ್ಯ ರೈಲ್ವೆಯಲ್ಲಿ ಉದ್ಯೋಗ ಪಡೆದು ವಂಚಿಸಿರುವ ಪ್ರಕರಣ ಸೋಮವಾರ ನಗರದಲ್ಲಿ ಬೆಳಕಿಗೆ ಬಂದಿತ್ತು. ಪ್ರಕಾಶಂ ಜಿಲ್ಲೆಯ ಗುದ್ದಲೂರು ತಾಲೂಕಿನ ಮಂಡ್ಲಾಚಕ್ರಧರ ವೆಂಕಟಸುಬ್ಬಯ್ಯ ನಕಲಿ ದಾಖಲೆ ಸೃಷ್ಟಿಸಿರುವ ವ್ಯಕ್ತಿ.