ಮಂಡ್ಯ:ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಭಾರಿ ಪ್ರಮಾಣದ ಸ್ಪೋಟಕಗಳನ್ನು ಈ ಹಿಂದೆ ಮಂಡ್ಯ ಪೊಲೀಸರು ವಶಪಡಿಸಿಕೊಂಡಿದ್ದರು. ಬಳಿಕ ಮ್ಯಾಗಜಿನ್ ಹೌಸ್‌ನಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು. ಆದರೆ ಇದೀಗ ಸ್ಫೋಟಕಗಳು ನಾಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಜನವರಿ 21 ರಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳದ ಬಳಿ ಟಾಟಾ ಗೂಡ್ಸ್ ವಾಹನದಲ್ಲಿ ಕಲ್ಲು ಗಣಿಗಾರಿಕೆಗೆ ಬಳಸುವ ಅಪಾಯಕಾರಿ ಸ್ಫೋಟಕಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಇದರ ಖಚಿತ ಮಾಹಿತಿ ಮೇರೆಗೆ ಕೆ.ಆರ್ ಪೇಟೆ ಪೊಲೀಸರು ದಾಳಿ ನಡೆಸಿದ್ದು, ವಾಹನ ಪರಿಶೀಲನೆ ಮಾಡಿದಾಗ 6 ಸಾವಿರ ಎಲೆಕ್ಟ್ರಿಕ್ ಡಿಟೋವೇಟರ್, 800 ನಾನ್ ಎಲೆಕ್ಟ್ರಿಕಲ್ ಡಿಟೋನೇಟರ್, 14,430 ಜಿಲೆಟಿನ್ ಕಡ್ಡಿಗಳನ್ನು ಪತ್ತೆಯಾಗಿದ್ದವು. ಬಳಿಕ ಇಬ್ಬರನ್ನು ಬಂಧಿಸಿ ವಶಪಡಿಸಿಕೊಂಡ ಸ್ಫೋಟಕಗಳನ್ನು ಸುರಕ್ಷಿತವಾಗಿ ಪಾಂಡವಪುರ ತಾಲೂಕು ರಂಗನಕೊಪ್ಪಲು ಗ್ರಾಮದ ಕೆ.ನಾಜೀಮುಲ್ಲಾ ಷರೀಫ್ ಎಂಬುವರಿಗೆ ಸೇರಿದ ಮ್ಯಾಗಜೀನ್ ಹೌಸ್‌ನಲ್ಲಿ ಇರಿಸಲಾಗಿತ್ತು.