ಬೆಂಗಳೂರು :ಶಾಸಕರಾಗಿ, ಸಚಿವರಾಗಿ, ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರೂ ಸಹ ಜಿ. ಮಾದೇಗೌಡರ ಹೆಸರು ಮಾತ್ರ ಯಾವತ್ತೂ ರೈತ ಪರ ಹೋರಾಟಗಾರ ಎಂಬ ಮೂಲಕವೇ ಗುರುತಾಗಿದೆ. ರೈತ ಪರ ಹೋರಾಟಕ್ಕೆ ಅವರು ಕೊಟ್ಟ ಗೌರವ, ಕಾಳಜಿ ಹಾಗೂ ನಿಷ್ಠೆ ಇದಕ್ಕೆ ಕಾರಣ. 92ರ ಇಳಿವಯಸ್ಸಿನಲ್ಲಿ ಮಂಡ್ಯದ ಕೆ.ಎಂ.ದೊಡ್ಡಿಯಲ್ಲಿರುವ ತಮ್ಮ ಪುತ್ರ ಕಟ್ಟಿಸಿರುವ ತಮ್ಮದೇ ಹೆಸರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿರುವ ಮಾದೇಗೌಡರು, ಕೊನೆಯವರೆಗೂ ಅಪ್ಪಟ ರೈತಪರ ಬದುಕು, ರೈತ ಪರ ಹೋರಾಟ ಹಾಗೂ ರೈತರ ಕ್ಷೇಮಾಭಿವೃದ್ಧಿಗೇ ಮುಡಿಪಾಗಿದ್ದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮೊದಲು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ಆದರೆ, ಪರಿಸ್ಥಿತಿ ವಿಷಮ ಸ್ಥಿತಿ ತಲುಪಿದ ಹಿನ್ನೆಲೆ ಹುಟ್ಟೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸಾಕಷ್ಟು ಗಣ್ಯರು ಇವರನ್ನು ಭೇಟಿಯಾಗಿ ಶೀಘ್ರ ಚೇತರಿಕೆಗೆ ಹಾರೈಸಿದ್ದರು. ಆದರೂ ವಿಧಿ ರೈತ ಪರ ಹೋರಾಟಗಾರನ ಉಸಿರು ನಿಲ್ಲಿಸಿದೆ.
ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದ ಮಾದೇಗೌಡರು ಕಾವೇರಿ ಹೋರಾಟದಲ್ಲಿ, ಹಳೆ ಮೈಸೂರು ಭಾಗ ಅದರಲ್ಲೂ ಮಂಡ್ಯದ ರೈತರ ಪರವಾಗಿ ಸದಾ ಹೋರಾಟ ನಡೆಸಿಕೊಂಡು ಬಂದಿದ್ದರು. ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಸಹ ಇವರು ಕಂಡಿದ್ದು ಜನರ, ರೈತರ ನೆಮ್ಮದಿಯನ್ನ ಅನ್ನುವುದು ವಿಶೇಷ. ಕಾವೇರಿ ಹೋರಾಟದ ವಿಚಾರದಲ್ಲಿ ಅವರ ನಿಷ್ಠೆ ಎಷ್ಟಿತ್ತೆಂದರೆ ಒಂದು ಸಂದರ್ಭದಲ್ಲಿ ಅನಿವಾರ್ಯ ಎದುರಾದಾಗ ಕಾವೇರಿ ಹೋರಾ'ಕ್ಕಾಗಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪಕ್ಷಾತೀತ, ಜನಾನುರಾಗಿ ನಾಯಕರಾಗಿದ್ದ ಇವರು ರೈತಪರ, ಕಾವೇರಿ ಪರ ಹೋರಾಟ ಮುಂಚೂಣಿಗೆ ಬಂದಾಗೆಲ್ಲಾ ವಯಸ್ಸಿನ ಪರಿವೆ ಲೆಕ್ಕಿಸದೇ ಅಖಾಡಕ್ಕೆ ಇಳಿಯುತ್ತಿದ್ದರು. ಸರ್ವ ಪಕ್ಷಗಳ ಸದಸ್ಯರ ಜತೆ ಸಮಾನವಾಗಿ ಬೆರೆಯುತ್ತಿದ್ದರು. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಎಸ್.ಎಂ.ಕೃಷ್ಣ ರವರ ಜೊತೆ ಶ್ರಮಿಸಿದವರು. 1962ರಿಂದ ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಿರುಗಾವಲು ಮಳವಳ್ಳಿ ಕ್ಷೇತ್ರದೊಂದಿಗೆ ಸೇರಿಕೊಂಡ ನಂತರ ಮಂಡ್ಯಕ್ಕೆ ಬಂದರು.
ಜಿ.ಮಾದೇಗೌಡರ ಹೋರಾಟದ ಚಿತ್ರಗಳು 1989, 1991ರಲ್ಲಿ 2 ಬಾರಿ ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಸದಸ್ಯರಾಗಿದ್ದರು. 1980–83ರವರೆಗೆ ಗುಂಡೂರಾವ್ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾಗಿ ಮಾದೇಗೌಡರು ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಕಾವೇರಿ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡ ಕೊನೆಯುಸಿರು
ನಟ ಅಂಬರೀಶ್‌ಗೆ 'ಮಂಡ್ಯದ ಗಂಡು' ಬಿರುದು ಕೊಟ್ಟಿದ್ದೇ ಮಾದೇಗೌಡರು..
ರೆಬೆಲ್ ಸ್ಟಾರ್ ಅಂಬರೀಶ್‌ಗೆ 'ಮಂಡ್ಯದ ಗಂಡು’ ಎಂಬ ಹೆಸರನ್ನಿಟ್ಟಿದ್ದೇ ಮಾದೇಗೌಡರು ಎಂಬ ಮಾತಿದೆ. ಏಕೆಂದರೆ, ಜಿ.ಮಾದೇಗೌಡರು ಅಂಬರೀಶ್ ರಾಜಕೀಯ ಗುರುವಾಗಿದ್ದರು. ಹಲವು ಸಂದರ್ಭದಲ್ಲಿ ಅಂಬರೀಶ್ ಇವರ ಸಲಹೆಗಳನ್ನು ಪಡೆದಿದ್ದರು. ಕಾವೇರಿ ಹೋರಾಟಕ್ಕೆ ಅಂಬರೀಶ್ ಬೆಂಬಲ ನೀಡಿದ್ದರು. ಸಂಸದ ಸ್ಥಾನಕ್ಕೆ ರಾಜೀನಾಮೆ ಸಹ ಸಲ್ಲಿಸಿದ್ದರು. ಮಾಜಿ ಸಚಿವ ಎಂ.ಹೆಚ್.ಅಂಬರೀಶ್ ರಾಜಕೀಯ ಜೀವನದ ನೋಟ, ಅಂಬರೀಶ್‌ಗೆ ಬೈಯ್ಯುವಷ್ಟು ಸಲುಗೆ ಇದ್ದದ್ದು ಮಾದೇಗೌಡರಿಗೆ ಮಾತ್ರ. ಅಂಬರೀಶ್ ಅವರು ಮಾದೇಗೌಡ್ರ ಮಾತನ್ನು ಕೇಳುತ್ತಿದ್ದರು ಎಂದು ಹೇಳಲಾಗುತ್ತದೆ.
ಜಿ.ಮಾದೇಗೌಡರ ಹೋರಾಟದ ಚಿತ್ರಗಳು ಮಹಾದಾನಿ ಮಾದೇಗೌಡರು..
ನೇರ ನುಡಿ ಹಾಗೂ ತಮ್ಮ ಪಾರದರ್ಶಕ ವ್ಯಕ್ತಿತ್ವದಿಂದ ಎಲ್ಲರಿಂದಲೂ ಗೌರವ ಮತ್ತು ಪ್ರೀತಿಗೆ ಪಾತ್ರರಾಗಿದ್ದ ಮಾದೇಗೌಡರು, ನೀಡಿದ ಒಂದು ದಾನ ಅವರಿಗೆ ಹುಟ್ಟೂರಿನ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ತಮ್ಮೂರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಬೇಕು ಎನಿಸಿದಾಗ, ತಾಯಿಯ ಹೆಸರಿನಲ್ಲಿದ್ದ ಮನೆಯನ್ನು ಸರ್ಕಾರಕ್ಕೆ ದಾನ ನೀಡಿ, ಆಸ್ಪತ್ರೆಯನ್ನು ತಂದು ಎಲ್ಲಾ ರಾಜಕಾರಣಿಗಳಿಗೆ ಮಾದರಿಯಾದರು. ಇವರು ಕೈಗೊಂಡ ಇನ್ನೊಂದು ಕ್ರಾಂತಿಕಾರ ಹೆಜ್ಜೆ ಎಂದರೆ ನಾನು ಚುನಾವಣೆಯಲ್ಲಿ ಮತದಾರರಿಗೆ ಹಣ ಮತ್ತು ಹೆಂಡ ಹಂಚಲಾರೆ ಎಂದು ಘೋಷಿಸಿ 20 ವರ್ಷಗಳ ಹಿಂದೆ ತಮ್ಮ ರಾಜಕೀಯ ಬದುಕಿಗೆ ವಿದಾಯ ಹೇಳಿದರು.
ಹಿರಿಯ ಗಾಂಧಿವಾದಿ
ಕಾವೇರಿ ನೀರು ಹಂಚಿಕೆ ವಿವಾದ ಭುಗಿಲೆದ್ದಾಗಲೆಲ್ಲಾ ಮಂಡ್ಯ, ಮೈಸೂರು ಮತ್ತು ಕೊಡಗು ಜಿಲ್ಲೆಯ ರೈತರ ಚಳವಳಿಯನ್ನು ಮುನ್ನಡಿಸಿದವರು ಮಾದೇಗೌಡ್ರು. ಒಬ್ಬ ರಾಜಕಾರಣಿಯಾಗಿದ್ದುಕೊಂಡು, ಅಂತರಂಗದಲ್ಲಿ ಗಾಂಧೀಜಿಯವರ ಪರಮ ಆರಾಧಕರಾಗಿದ್ದ ಮಾದೇಗೌಡರು ಬಾಲ್ಯದಿಂದಲೂ ಗಾಂಧೀಜಿಯವರ ತತ್ವ ಮತ್ತು ಚಿಂತನೆಗಳನ್ನು ಮೈಗೂಡಿಸಿಕೊಂಡು ಬೆಳದವರು.
ಜಿ.ಮಾದೇಗೌಡರ ಹೋರಾಟದ ಚಿತ್ರಗಳು ಈ ಕಾರಣಕ್ಕಾಗಿ ತಮ್ಮ ರಾಜಕೀಯ ನಿವೃತ್ತಿಯ ನಂತರ ಮಂಡ್ಯ ನಗರದ ಹೃದಯ ಭಾಗದಲ್ಲಿ ಹತ್ತು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಎಲ್ಲಿಯೂ ಕಾಣದ ಅಪರೂಪದ ಗಾಂಧಿ ಭವನವನ್ನು 1 ಕೋಟಿ 75 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ, ಅದನ್ನು ಗಾಂಧೀಜಿಯವರ ಕನಸಿನ ಮತ್ತು ಗ್ರಾಮಭಾರತದ ಪರಿಕಲ್ಪನೆಯ ತಳಹದಿಯ ಮೇಲೆ ನಡೆಸಿಕೊಂಡು ಹೋಗಿದ್ದಾರೆ. ತಾವು ರಾಜಕಾರಣದಲ್ಲಿದ್ದರೂ, ಮಕ್ಕಳನ್ನು ರಾಜಕೀಯಕ್ಕೆ ತರದೇ ವಂಶಪಾರಂಪರ್ಯ ರಾಜಕೀಯಣಕ್ಕೆ ತಿಲಾಂಜಲಿ ಹಾಡಬೇಕೆಂಬ ಸಂದೇಶ ಸಾರಿದ ಮಹಾನ್ ವ್ಯಕ್ತಿ ಇನ್ನು ನೆನಪು ಮಾತ್ರ.