ಮಂಡ್ಯ : ಗಣಿಗಾರಿಕೆಯಿಂದ ವಿಶ್ವವಿಖ್ಯಾತ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ವಿಚಾರ ಸಂಸದೆ ಸುಮಲತಾ ಅಂಬರೀಷ್ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ನಡುವೆ ದೊಡ್ಡ ಮಟ್ಟದ ವಾಗ್ವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇಂದು ಡ್ಯಾಂ ಬಳಿ ದೃಷ್ಟಿ ನಿವಾರಣಾ ಪೂಜೆ ಹಮ್ಮಿಕೊಳ್ಳಲಾಗಿದೆ.
ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ಪದೇ ಪದೆ ಹೇಳಿಕೆ ನೀಡುತ್ತಿರುವುದರಿಂದ ಡ್ಯಾಂಗೆ ದೃಷ್ಟಿಯಾಗಿದೆ. ಈ ಹಿನ್ನೆಲೆ ಶೀಘ್ರವೇ ಅಣೆಕಟ್ಟೆಗೆ ಪೂಜೆ ಮಾಡಲಾಗುವುದು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದರು. ಇದಕ್ಕೂ ಮುನ್ನ ಸಂಸದೆ, ಶಾಸಕ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಈ ಹಿನ್ನೆಲೆ ಡ್ಯಾಂನಲ್ಲಿ ದೃಷ್ಟಿ ನಿವಾರಣಾ ಪೂಜೆಯ ಜೊತೆಗೆ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಸದೆಗೆ ಟಾಂಗ್ ಕೊಡುವಂತೆ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಡ್ಯಾಂನ ಕಾವೇರಿ ಪ್ರತಿಮೆ ಬಳಿ ಬೆಳಗ್ಗೆ ಹೋಮ, ಹವನ ನಡೆಯಲಿದೆ. ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ನದಿಗೆ ನೀರು ಬಿಡುಗಡೆ :ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್‌ಎಸ್ ಅಣಿಕಟ್ಟೆಯಿಂದ ಹೊರ ಹರಿವಿನ ಪ್ರಮಾಣ ಹೆಚ್ಚಿಸಲಾಗಿದೆ. ಭಾನುವಾರ ಬೆಳಗ್ಗೆ 6,496 ಕ್ಯೂಸೆಕ್ ನೀರನ್ನು ಹೊರಬಿಡಲಾಗಿತ್ತು, ಸಂಜೆ ವೇಳೆಗೆ 10,034 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
ಜಲಾಶಯ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಭಾನುವಾರ ಬೆಳಗ್ಗೆ 41, 084 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಸಂಜೆಯ ಹೊತ್ತಿಗೆ ಈ ಪ್ರಮಾಣ 37,048 ಆಗಿದೆ. 124.80 ಅಡಿ ಗರಿಷ್ಠ ಸಂಗ್ರಹದ ಅಣೆಕಟ್ಟೆಯಲ್ಲಿ ಭಾನುವಾರ ಸಂಜೆ 110.10 ಅಡಿ ನೀರಿನ ಸಂಗ್ರಹವಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಸೂಚನೆ ಹಿನ್ನೆಲೆ ಸೋಮವಾರದಿಂದ ನಾಲೆಗಳಿಗೆ ನೀರು ಬಿಡುವ ಸಾಧ್ಯತೆ ಇದೆ.