ಮಂಡ್ಯ:ಮಾಜಿ ಸಂಸದ ಶಿವರಾಮೇಗೌಡ ಸದ್ಯ ಸಿಲಿಕಾನ್ ಸಿಟಿಯಲ್ಲಿ ಹೊಗೆಯಾಡುತ್ತಿರುವ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ಹೊಸ ಬಾಂಬ್ ಸಿಡಿಸಿದ್ದಾರೆ. ಅವರು ಬೆಂಗಳೂರು ಮಾತ್ರವಲ್ಲ ನಾಗಮಂಗಲದಲ್ಲೂ ಡ್ರಗ್ಸ್ ಸಿಗುತ್ತೆ ಎಂದಿದ್ದಾರೆ.
ಬೆಂಗಳೂರು ಮಾತ್ರವಲ್ಲ, ನಾಗಮಂಗಲದಲ್ಲೂ ಡ್ರಗ್ಸ್ ಸಿಗುತ್ತೆ: ಮಾಜಿ ಸಂಸದ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇದ್ರಿಂದ ಗ್ರಾಮಾಂತರ ಪ್ರದೇಶಕ್ಕೂ ಡ್ರಗ್ಸ್ ದಂಧೆ ವ್ಯಾಪಿಸುತ್ತಿದೆ. ಹೊರ ದೇಶಗಳಿಂದ ಬಂದಿರೋರು ನಿರ್ಭೀತವಾಗಿ ಡ್ರಗ್ಸ್ ಮಾರುತ್ತಿದ್ದಾರೆ ಎಂದು ಆರೋಪಿಸಿದರು. ಬೆಂಗಳೂರಿನ ಕಲ್ಯಾಣ ನಗರದಲ್ಲಿ ನನ್ನದು ಸ್ಕೂಲ್ ಇದೆ. ಆ ರಸ್ತೆಯಲ್ಲಿ ನೈಜೀರಿಯ, ಸೌತ್ ಆಫ್ರಿಕಾ ಪ್ರಜೆಗಳು ಡ್ರಗ್ಸ್ ಮಾರಾಟ ಮಾಡುತ್ತಾ, ಸೇವನೆ ಮಾಡುತ್ತಲೂ ನಿಂತಿರುತ್ತಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದೇವೆ ಎಂದರು.
ಆದರೆ ಸ್ಯಾಂಡಲ್ವುಡ್ ಈ ಮಟ್ಟಕ್ಕೆ ಆಗಿರೋದು ದುರ್ದೈವ. ಡ್ರಗ್ಸ್ ದಂಧೆ ಮಟ್ಟ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ. ಯಡಿಯೂರಪ್ಪ ಸರ್ಕಾರ ಮಾತ್ರವಲ್ಲ, 20 ವರ್ಷದಿಂದ ಡ್ರಗ್ಸ್ ದಂಧೆ ನಡೆದುಕೊಂಡು ಬರ್ತಿದೆ. ಈಗ ದೊಡ್ಡ ಪ್ರಮಾಣಕ್ಕೆ ಹೋಗಿದೆ. ಜೆಡಿಎಸ್ ಸರ್ಕಾರವಿದ್ದಾಗಲೂ ಡ್ರಗ್ಸ್ ದಂಧೆ ನಡೆಯುತ್ತಿತ್ತು. ನಮ್ಮದೇ ಪಕ್ಷದ ಮುಖಂಡರು ಗಾಂಜಾ ಸೇರಿದಂತೆ ಬೇರೆ ಬೇರೆ ಚಟುವಟಿಕೆಯಿಂದ ಬಂದ ಹಣದಲ್ಲೇ ಸರ್ಕಾರ ಬೀಳಿಸುವ ಪ್ರಯತ್ನ ಮಾಡಿದ್ದರು. ಡ್ರಗ್ಸ್ ದಂಧೆಕೋರರಿಗೆ ರಾಜಕಾರಣಿಗಳ ಬೆಂಬಲವೂ ಇದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅಷ್ಟೇ ಅಲ್ಲ ಗೋವಾ, ಶ್ರೀಲಂಕಾಗೆ ಕರೆದೊಯ್ದು ಇಸ್ವೀಟ್ ಆಡಿಸುವಂತಹ ದಂಧೆ ಇದೆ. ತೋಟದ ಮನೆಯಲ್ಲಿ ರೇವ್ ಪಾರ್ಟಿ ಮಾಡುವಂತಹ ದಂಧೆ ನಡೆಯುತ್ತಿದೆ. ಇಂತಹ ಘಟನೆಗಳಿಂದ ದೂರವಾಗಬೇಕಾದರೆ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.