ಮಂಡ್ಯ: ಮೇಡಂ ಇನ್ಮುಂದೆ ಸ್ವಾಭಿಮಾನಿ ಅನ್ನುವ ಪದವನ್ನು ನೀವು ಬಳಸಬೇಡಿ. ಸ್ವಾಭಿಮಾನವನ್ನು ಅಡವಿಡಬೇಡಿ ಎಂದು ಸಂಸದೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ ರವೀಂದ್ರ ಅವರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಗೆ ಸಂಸದೆ ಸುಮಲತಾ ಬೆಂಬಲ ಘೋಷಿಸಿದ ಹಿನ್ನೆಲೆ ಸ್ವಾಭಿಮಾನಿ ಸಂಸದರ ವಿರುದ್ದ ಕಾಂಗ್ರೆಸ್ ನಾಯಕ ಅಸಮಾಧಾನ ಹೊರಹಾಕಿದ್ದಾರೆ.
ಗೆದ್ದ ಮೇಲೆ ಜಿಲ್ಲೆಗೆ ಏನಾದ್ರು ಮಾಡಿದ್ದೀರಾ?:ನೀವು ಕೊಲೆಗಡುಕರಾಗಿದ್ದೀರಿ, ಕತ್ತು ಹಿಸುಕಿದ್ದೀರಿ. ತಾವು ಬೆನ್ನಿಗೆ ಚೂರಿ ಹಾಕೋರು, ಸುಮಲತಾರಿಗಾಗಿ, ಜಿಲ್ಲೆ ಅಸ್ಮಿತೆ ಸ್ವಾಭಿಮಾನಕ್ಕಾಗಿ 249 ಕಿ.ಮೀ ಪಾದಯಾತ್ರೆ ಮಾಡಿದ್ದೆ. ನನ್ನಂತ ಹಲವರ ಹೋರಾಟದಿಂದ ನೀವು ಗೆದ್ರಿ. ಆದಾದ ಬಳಿಕ ನೀವು ಎಲ್ಲಿಗೆ ಹೋದ್ರಿ? ಗೆದ್ದ ಮೇಲೆ ಜಿಲ್ಲೆಗೆ ಏನಾದ್ರು ಮಾಡಬೇಕು ಎಂಬ ಪ್ರಯತ್ನ ಪಟ್ಟಿದ್ದೀರಾ.? ಅದ್ಯಾವುದನ್ನು ನೀವು ಮಾಡ್ಲಿಲ್ಲ. ನಿಮಗೆ ಅದ್ಯಾರು ಮಾರ್ಗದರ್ಶಕರು ಇದ್ದಾರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪದೇ ಪದೆ ಸ್ವಾಭಿಮಾನಿ ಪದ ಬಳಸುತ್ತೀರಿ:ಜಿಲ್ಲೆಯ ಬೆಳವಣಿಗೆಗೆ ಏನು ಬೇಕು ಅಂತ ಹೇಳುವ ಯೋಗ್ಯತೆ ನಮಗೆ ಇರಲಿಲ್ವ. ಆ ಯೋಗ್ಯತೆ ನಮಗಿಲ್ಲ ಅಂತಾ ನೀವು ಯಾಕೆ ಅನ್ಕೊಂಡ್ರಿ. ಇವತ್ತು ಯಾಕೆ ಸ್ವಾಭಿಮಾನಿ ಅಂತ ಪದವನ್ನು ಪದೇ ಪದೆ ಬಳಸುತ್ತೀರಿ. ಸ್ವಾಭಿಮಾನಕ್ಕೂ ನಿಮಗೂ ಎಲ್ಲಿಂದೆಲ್ಲಿ ಸಂಬಂಧ.? ಯಾವ ಸ್ವಾಭಿಮಾನಿ ಕೆಲಸವನ್ನು ನೀವು ಮಾಡಿದ್ದೀರಾ ಎಂದು ಡಾ. ರವೀಂದ್ರ ಪ್ರಶ್ನಿಸಿದ್ದಾರೆ.
ನಿಮ್ಮನ್ನೂ ಜಿಲ್ಲೆಗೆ ಇವತ್ತು ಬರ್ತೀರಾ, ನಾಳೆ ಬರ್ತೀರಾ ಎಂದು ಕಾದಿದ್ದು ಸಾಕಾಯಿತು.ನಿಮ್ಮ ನಂಬಿದ್ದ ಜನರಿಗೆ ಸಿಕ್ಕ ಭಾಗ್ಯ. ಇವತ್ತು ನರೇಂದ್ರ ಮೋದಿಯವರ ಅದ್ಭುತ ಕಾರ್ಯದಿಂದ ಅವರನ್ನು ಸಂಪೂರ್ಣ ಬೆಂಬಲಿಸ್ತೀನಿ ಅಂತೀರಾ? ಅವತ್ತು ನಿಮ್ಮನ್ನ ಗೆಲ್ಲಿಸಲು ಹೋರಾಟ ಮಾಡಿದ್ರಲ್ಲ ಅವರ ಕಥೆ ಏನು.? ಎಂದು ಅವರು ಕೇಳಿದ್ದಾರೆ.
ಜಿಲ್ಲೆಯ ಸ್ವಾಭಿಮಾನ ಅಡವಿಡಲು ಹೋಗಬೇಡಿ: ನಾನು, ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಾಬು ಬಂಡೀಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ ಬಿ ಚಂದ್ರಶೇಖರ್ ಜೊತೆ ನಿಂತ್ವಿ. ಇವತ್ತು ಯಾರಿಗೆ ನೀವು ನ್ಯಾಯ ಕೊಡ್ತಿದ್ದೀರಾ?. ನೀವು ಈಗಲೇ ಉತ್ತರ ಕೊಡಿ. ನಿಮ್ಮ ಬಾಯಲ್ಲಿ ಇಂದಿನಿಂದ ಸ್ವಾಭಿಮಾನ ಅನ್ನೋ ಪದ ಬರಬಾರದು. ನಮ್ಮ ಜಿಲ್ಲೆಯ ಸ್ವಾಭಿಮಾನವನ್ನ ನೀವು ಅಡವಿಡಲು ಹೋಗಬೇಡಿ. ನಿಮಗೆ ಸ್ವಾಭಿಮಾನ ಅಂತೇಳಲು ಯಾವುದು ಹಕ್ಕು ಇಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ತಾಕೀತು ಮಾಡಿದರು.
ಹತ್ತು ಹಲವು ವಿಚಾರಗಳು ಹೊರಗೆ ಬರ್ತಾವೆ:ನೀವು ಯಾವ ರೀತಿ ಕತ್ತು ಹಿಸುಕುತ್ತಿದ್ದೀರಿ, ಕೊಲೆಗಡುಕರು ಅನ್ನೋದನ್ನ ಹೇಳಿ. ನೀವು ಬೆನ್ನಿಗೆ ಚೂರಿ ಹಾಕೋರು ಅನ್ನೋದನ್ನ ಹೇಳಿ. ಸಚ್ಚಿದಾನಂದನನ್ನು ಬಿಟ್ಟುಕೊಡಲು ನಿಮಗೆ ಆಗಲ್ಲ. ಹಾಗಿದ್ರೆ ರಮೇಶ್ ಬಂಡೀಸಿದ್ದೇಗೌಡ, ಬೆಂಬಲವಾಗಿ ನಿಂತ ರೈತ ಸಂಘಕ್ಕೆ ಏನು ನ್ಯಾಯ ಕೊಡ್ತೀರಾ? ನಮ್ಮಣ್ಣನ ಮರ್ಯಾದೆ ಕಳೆಯಲು ಹೋಗಬೇಡಿ. ನೀವು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಿ. ಇಲ್ಲದಿದ್ದರೇ ಇನ್ನೂ ಹತ್ತು ಹಲವು ವಿಚಾರಗಳು ಹೊರಗೆ ಬರ್ತಾವೆ. ಭವಿಷ್ಯದಲ್ಲಿ ಯಾವತ್ತು ಸ್ವಾಭಿಮಾನಿ ಅನ್ನೋ ಪದ ಉಪಯೋಗಿಸಬೇಡಿ ಎಂದು ಸಂಸದೆ ಸುಮಲತಾ ವಿರುದ್ಧ ಡಾ. ರವೀಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂಓದಿ:ದೆಹಲಿಯತ್ತ ಸಚಿವ ಸೋಮಣ್ಣ ಪ್ರಯಾಣ: ಬಿಎಸ್ವೈ ವಿರುದ್ಧ ಪರೋಕ್ಷ ಅಸಮಾಧಾನ