ಮದ್ದೂರು (ಮಂಡ್ಯ): "ರಾಜ್ಯ ಮತ್ತು ರಾಷ್ಟ್ರವನ್ನು ಕಾಪಾಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಅವರು ಅವರದ್ದೇ ಸಿದ್ಧಾಂತವನ್ನು ಪಾಲಿಸುತ್ತಿದ್ದಾರೆ. ಇನ್ನು ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಯಾವತ್ತಿದ್ದರೂ ಕಮಲ ಕೆರೆಯಲ್ಲಿದ್ರೆ ಚಂದ, ತೆನೆ ಹೊಲದಲ್ಲಿದ್ರೆ ಚಂದ, ದಾನ ಧರ್ಮ ಮಾಡಿರುವ ಕೈ ಅಧಿಕಾರಕ್ಕೆ ಬಂದ್ರೇನೆ ಚಂದ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಡ್ಯದ ಮದ್ದೂರಿನಲ್ಲಿ ಶನಿವಾರ 'ಪ್ರಜಾಧ್ವನಿ ಯಾತ್ರೆ' ಉದ್ದೇಶಿಸಿ ಮಾತನಾಡಿದ ಅವರು, "ಬಿಜೆಪಿಗೆ ಭ್ರಷ್ಟ ಸರ್ಕಾರವೆಂಬ ಹೆಸರಿದೆ. ಅವರು ಅವರದ್ದೇ ಆದ ಸಿದ್ಧಾಂತವನ್ನು ರಾಜಕೀಯದಲ್ಲಿ ಪಾಲಿಸುತ್ತಾರೆ. ಹೀಗಾಗಿ ಅವರು ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವುದಿಲ್ಲ. ಅಲ್ಲದೇ ರಾಜ್ಯ ಮತ್ತು ರಾಷ್ಟ್ರವನ್ನು ಕಾಪಾಡಬೇಕಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ" ಎಂದು ಮನವಿ ಮಾಡಿದರು.
"ದೇಶದಲ್ಲಿ ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗಿದೆ. ಆದಾಯ ಮಾತ್ರ ಹಾಗೆಯೇ ಇದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಪ್ರತಿ ತಿಂಗಳು ಮನೆಯೊಡತಿಯ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿ ಕೊಡುವ ತೀರ್ಮಾನ ಮಾಡಿದ್ದೇವೆ. 200 ಯೂನಿಟ್ ಕರೆಂಟ್ ಉಚಿತವಾಗಿ ನೀಡುತ್ತೇವೆ. ಈ ಬಗ್ಗೆ ನಾನು ಮತ್ತು ಸಿದ್ದರಾಮಯ್ಯ ಗ್ಯಾರಂಟಿ ಚೆಕ್ಗೂ ಸಹಿ ಮಾಡಿದ್ದೇವೆ. ನಾವು ಹೇಳಿದಂತೆ ನಡೆಯದೇ ಇದ್ದಲ್ಲಿ ಮುಂದೆ ನಿಮ್ಮ ಮನೆಗೆ ಮತ ಕೇಳಿಕೊಂಡು ಬರುವುದಿಲ್ಲ" ಎಂದರು.