ಮಂಡ್ಯ:ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಈ ರಾಜ್ಯದ ಗೌರವವನ್ನು ಕಾಪಾಡಲಿ ಹಾಗೂ ಉತ್ತಮವಾದ ಆಡಳಿತ ನೀಡಲಿ ಎಂದು ನೂತನ ಮುಖ್ಯಮಂತ್ರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶುಭಕೋರಿದರು.
ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ಮಂಡ್ಯದ ಹನುಮಂತನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಕೇಂದ್ರದಿಂದ ಬಹಳ ವಂಚಿತರಾಗಿದ್ದೇವೆ. ಆದ್ರೆ ನಾವು ಯಾರು ಕೂಡ ಧ್ವನಿ ಎತ್ತಲಿಲ್ಲ. ಯಾವ ಸಂಸತ್ ಸದಸ್ಯರು ಮಾತನಾಡಿಲ್ಲ. ಅಲ್ಲದೇ ಕೇಂದ್ರ ಸರ್ಕಾರದಿಂದ ಬರಬೇಕಾದ ಅನೇಕ ಯೋಜನೆಗಳು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
'ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ'
ಸದ್ಯ ಮೇಕೇದಾಟು ಅಣೆಕಟ್ಟು ವಿಚಾರದಲ್ಲಿ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ. ಇದನ್ನ ಬಸವರಾಜ ಬೊಮ್ಮಾಯಿ ಅವರು ಸಂಸತ್ ಸದಸ್ಯರನ್ನು ಮುಂದೆ ನಿಲ್ಲಿಸಿ ರಾಜ್ಯದ ಹಿತ ಕಾಪಾಡಿ ಎಂದರು, ನೂತನ ಸಿಎಂ ರಾಜ್ಯದ ಕಳಂಕವನ್ನ ನಿವಾರಣೆ ಮಾಡಲಿ ಎಂದರು.
'ಬಿಜೆಪಿ ಪಕ್ಷದಲ್ಲಿ ಶಿಸ್ತಿಲ್ಲ'
ಕಾಂಗ್ರೆಸ್-ಜೆಡಿಎಸ್ ಪಕ್ಷ ಬಿಟ್ಟುಹೋದ ಶಾಸಕರಿಗೆ ಸಚಿವ ಸ್ಥಾನ ಕೈ ಬಿಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಅವರ ಸರ್ಕಾರದಲ್ಲಿ ಯಾರ್ಯಾರೋ ಏನೇನೊ ಸ್ಟೇಟ್ಮೆಂಟ್ ಕೊಡ್ತಿದ್ರೂ ಪಕ್ಷದಲ್ಲಿ ಶಿಸ್ತು ಕಾಣ್ತಿರಲಿಲ್ಲ, ಈಗ ನೋಡೋಣ ಏನಾಗುತ್ತೆ ಅಂತ ಎಂದು ವ್ಯಂಗ್ಯವಾಡಿದರು.
'ಬಿಎಸ್‌ವೈ ಕಣ್ಣೀರಿನ ಹಿನ್ನೆಲೆ ಬಗ್ಗೆ ತಿಳಿಸಿ'
ಯಡಿಯೂರಪ್ಪ ರಾಜೀನಾಮೆ ಕೊಟ್ಟ ದಿನ ನಾನು ಕೇಳಿದ್ದು, ಅವರ ಕಣ್ಣೀರಿನ ಹಿನ್ನೆಲೆ ಹೇಳಬೇಕು ಅಂತಾ. ಹೀಗಾಗಿ ಯಡಿಯೂರಪ್ಪ ತಮ್ಮ ಕಣ್ಣೀರಿನ ಹಿಂದಿನ ವಿಚಾರ ಏನು ಅನ್ನೋದನ್ನ ರಾಜ್ಯದ ಜನರಿಗೆ ತಿಳಿಸಬೇಕು ಎಂದರು.
ಮಂತ್ರಿಮಂಡಲ ಮಾಡಲು ಬಿಡಲಿಲ್ಲ, ನನಗೆ ಆಡಳಿತ ಮಾಡಲು ಬಿಡಲಿಲ್ಲ ಅಂತಾ ಪಾಪ ಯಡಿಯೂರಪ್ಪ ಹೇಳಿದ್ರು. ಆಗ ಸ್ವಾಮಿಜಿಗಳು ನೋವು ವ್ಯಕ್ತಪಡಿಸಿದ್ದನ್ನು ನಾವು ನೋಡಿದ್ದೇವೆ. ಅದು ಅವರ ಸ್ವಾತಂತ್ರ್ಯ, ಅವರ ಅಭಿಪ್ರಾಯಕ್ಕೆ ನಾವು ಅಡ್ಡಿ ಬರಲ್ಲ. ಆದ್ರೆ ಯಡಿಯೂರಪ್ಪ ಅವರ ನೋವು ಮತ್ತು ಅವರ ಕಣ್ಣೀರಿನ ಹಿನ್ನೆಲೆ ಬಗ್ಗೆ ರಾಜ್ಯದ ಜನತೆಗೆ ತಿಳಿಸಬೇಕು ಎಂದು ಒತ್ತಾಯ ಮಾಡ್ತೇನೆ ಎಂದು ಹೇಳಿದರು.