ಮಂಡ್ಯ:ಸರ್ಕಾರ, ಸ್ಥಳೀಯ ಪಂಚಾಯತ್ ನೋಟಿಸ್‌ಗೆ ಜನ ಭಯಗೊಳ್ಳೋದು ಸಾಮಾನ್ಯ. ಆದರೆ ಇಲ್ಲೊಂದು ಗ್ರಾಮವಿದೆ, ಈ ಗ್ರಾಮದಲ್ಲಿ ಎಚ್ಚರಿಕೆಗೂ ಜನ ಡೋಂಟ್ಕೇರ್. ನೀವು ಬೋರ್ಡ್ ಹಾಕಿ, ನಾವು ಅಲ್ಲೇ ಕಸ ಹಾಕ್ತೀವಿ ಅಂತ ನಿರ್ಣಯ ಮಾಡಿದಂತಿದೆ ಇಲ್ಲಿನ ಪರಿಸ್ಥಿತಿ. ಹಾಗಾದರೆ ಈ ಪರಿಸ್ಥಿತಿಗೆ ಕಾರಣ ಏನು ಅನ್ನೋದು ಇಲ್ಲಿದೆ ನೋಡಿ.
ಗ್ರಾಮಸ್ಥರಿಂದ ಹೀಗೊಂದು ವಿನೂತನ ಪತ್ರಿಭಟನೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮ ದಶಕಗಳ ಹಿಂದೆ ಸ್ವಚ್ಛ ಹಳ್ಳಿ ಎಂದು ಗಾಂಧಿ ಪುರಸ್ಕಾರ ಪಡೆದುಕೊಂಡಿತ್ತು. ಆದರೆ, ಈಗಿನ ಪರಿಸ್ಥಿತಿಯೇ ಬೇರೆಯಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಲ್ಲೆಲ್ಲಿ ಕಸ ಹಾಕಿದರೆ ದಂಡ ಎಂದು ನೋಟಿಸ್ ಬೋರ್ಡ್ ಹಾಕಲಾಗಿದೆಯೋ ಅಲ್ಲೆಲ್ಲ ಕಸದ ರಾಶಿಯೇ ತುಂಬಿ ತುಳುಕುತ್ತಿದೆ. ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಕಡೆ 500 ರೂ.ಗಳ ದಂಡದ ಬೋರ್ಡ್ ಹಾಕಲಾಗಿದೆ. ಆದರೆ, ಜನ ಮಾತ್ರ ನೋಟಿಸ್ ಬೋರ್ಡ್‌ಗೆ ಭಯಗೊಳ್ಳದೇ ಕಸದ ರಾಶಿಯನ್ನೇ ಸೃಷ್ಟಿ ಮಾಡಿದ್ದಾರೆ.
ಯಾಕಾಗಿ ಈ ಕಸದ ರಾಶಿ ಹೀಗೆ ಹಾಕಲಾಗಿದೆ ಎಂದು ಕಾರಣ ಕೇಳಲು ಗ್ರಾಮ ಪಂಚಾಯಿತಿ ಬಳಿ ಈಟಿವಿ ಭಾರತ್ ಪ್ರತಿನಿಧಿ ಹೋದಾಗ ಅಸಲಿ ಸತ್ಯ ಗೋಚರಿಸಿತು. ಗ್ರಾಮ ಪಂಚಾಯಿತಿಗೆ ಹೊಸದಾಗಿ ಬಂದಿರುವ ಅಭಿವೃದ್ಧಿ ಅಧಿಕಾರಿ ಸರಿಯಾಗಿ ಕಚೇರಿಗೆ ಬರುತ್ತಿಲ್ಲ ಎಂಬುದು ಗೊತ್ತಾಗಿ ಜನರು ಹೀಗೆ ಕಸದ ರಾಶಿ ಹಾಕುವ ಮೂಲಕ ವಿನೂತನ ಪ್ರತಿಭಟನೆ ಆರಂಭ ಮಾಡಿದ್ದಾರೆ ಎಂಬುದು. ಈ ಬಗ್ಗೆ ಗ್ರಾಮಸ್ಥರು ನೇರವಾಗಿ ಹೇಳದೇ ಇದ್ದರೂ ಪರೋಕ್ಷವಾಗಿ ಹೇಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಚೇರಿಗೆ ಬಂದರಷ್ಟೇ ಬಂದರು ಎಂಬ ಮಾತುಗಳು ಕೇಳಿ ಬಂದಿವೆ. ಜೊತೆಗೆ ಜನರ ಫೋನ್ ಕೂಡ ಅಧಿಕಾರಿ ಸ್ವೀಕಾರ ಮಾಡುತ್ತಿಲ್ಲ ಎಂಬ ಆರೋಪವೂ ಇದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ.
ಇನ್ನಾದರೂ ಗ್ರಾಮ ಪಂಚಾಯಿತಿ ಅಧಿಕಾರಿ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುವ ಮೂಲಕ ಕಸದ ಹೋರಾಟಕ್ಕೆ ಮುಕ್ತಿ ನೀಡಬೇಕಾಗಿದೆ. ನೋಟಿಸ್ ಅಂಟಿಸಿದರೆ ಏನು ಪ್ರಯೋಜನ, ಜಾರಿಗೆ ತರಬೇಕು ಎಂಬ ಸಲಹೆಯೂ ಕೇಳಿ ಬಂದಿದೆ.