ಮಂಡ್ಯ :ಜಿಲ್ಲೆಯಲ್ಲಿ ಪೊಲೀಸ್ ಅವ್ಯವಸ್ಥೆ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಂ ಅಶ್ವಿನಿಗೆ ಡಿಜಿಪಿ ಪ್ರವೀಣ್ ಸೂದ್ ಇಂದು ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಡಿಜಿಪಿ, ಮಾರ್ಗ ಮಧ್ಯೆ ಮಂಡ್ಯ ನಗರದ ಪ್ರವಾಸಿ ಮಂದಿರದಲ್ಲಿ ಎಸ್ಪಿ ಜೊತೆ ಗೌಪ್ಯ ಚರ್ಚೆ ನಡೆಸಿದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವ ಬಗ್ಗೆ ಹಾಗೂ ಎಸ್ಪಿ ವಿರುದ್ಧದ ಆರೋಪದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಎಸ್ಪಿ ಡಾ.ಅಶ್ವಿನಿ ಅವರನ್ನ ಡಿಜಿಪಿ ಇದೇ ವೇಳೆತರಾಟೆಗೆ ತೆಗೆದುಕೊಂಡರು.
ಡಿಜಿಪಿ ಕೇಳಿದ ಪ್ರಶ್ನೆಗೆ ಎಸ್ಪಿ ತಬ್ಬಿಬ್ಬು: ನಕಲಿ ವೋಟರ್ ಐಡಿ, ಪಾಸ್‌ಪೋರ್ಟ್, ಆಧಾರ್ ಕಾರ್ಡ್ ದಂಧೆ ಅಲ್ಲದೇ ನಿಷೇಧದ ನಡುವೆಯೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅನುಮತಿ ಪಡೆಯದೆ ಎಸ್ಪಿ ಸರ್ಕಾರಿ ನಿವಾಸದಲ್ಲಿದ್ದ ಮರಗಳನ್ನ ಕಡಿದ ಪ್ರಕರಣ, ಮರ ಕಡಿಯಲು ತರಬೇತಿ ನಿರತ ಪೊಲೀಸ್ ಪೇದೆಗಳ ದುರ್ಬಳಕೆ ಬಗ್ಗೆ ಡಿಜಿಪಿ ಕೇಳಿದ ಪ್ರಶ್ನೆಗೆ ಎಸ್ಪಿ ತಬ್ಬಿಬ್ಬಾದರು.
ಪೆಂಡಿಂಗ್ ಪ್ರಕರಣ ಇತ್ಯರ್ಥಕ್ಕೆ ಸೂಚನೆ :ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವ ಬಗ್ಗೆ ಡಿಜಿಪಿ ಪ್ರಶ್ನೆಗೆ ಉತ್ತರಿಸಲಾಗದೆ ಎಸ್ಪಿ ಅಸಹಾಯಕರಾದರು. ಇನ್ನು ಪೆಂಡಿಂಗ್ ಉಳಿದ ಪ್ರಕರಣಗಳ ಇತ್ಯರ್ಥ ಮಾಡುವಂತೆ ಎಚ್ಚರಿಕೆ ನೀಡಿದರು.
ಮಾಧ್ಯಮಗಳಿಂದ ಡಿಜಿಪಿ ದೂರ :ಮಂಡ್ಯಕ್ಕೆ ಆಗಮಿಸಿದ್ದ ಡಿಜಿಪಿ ಪ್ರವೀಣ್ ಸೂದ್ ಸಾರ್ವಜನಿಕರು, ಮಾಧ್ಯಮಗಳನ್ನ ಭೇಟಿಯಾಗದೆ ದೂರ ಉಳಿದರು. ಅಲ್ಲದೇ ಎಸ್ಪಿ ಜೊತೆ ಗೌಪ್ಯ ಚರ್ಚೆ ನಡೆಸಿದ ಅವರು, ದೂರು ನೀಡಲು ಆಗಮಿಸಿದ್ದ ಸಾರ್ವಜನಿಕರು ಭೇಟಿ ಮಾಡದೇ, ದೂರು ಸ್ವೀಕರಿಸದೇ ಹೊರಟು ಹೋದರು. ಮಾಧ್ಯಮದವರು ಮಾತನಾಡಿಸಲು ಮುಂದಾದ ವೇಳೆ, ಸ್ಥಳೀಯ ಪೊಲೀಸರಿಂದ ಮಾಧ್ಯಮದವರನ್ನು ಹತ್ತಿರ ಬರದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.