ಮಂಡ್ಯ:ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಒಗ್ಗೂಡಿ ಪ್ರಚಾರಕ್ಕೆ ಧುಮುಕಿದ್ದಾರೆ. ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಅವರು ಜಂಟಿ ಪ್ರಚಾರ ನಡೆಸಿದರು.
ಕೆ. ಹೊನ್ನಲಗೆರೆ ಗ್ರಾಮದಿಂದ ಜಂಟಿ ಪ್ರಚಾರ ಆರಂಭ ಮಾಡಿದ ಸಿಎಂ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೆ ಭರ್ಜರಿ ಸ್ವಾಗತವೇ ಸಿಕ್ಕಿತು. ಕೆ. ಹೊನ್ನಲಗೆರೆ ಹಾಗೂ ಕೆ.ಎಂ.ದೊಡ್ಡಿಯಲ್ಲಿ ಜಂಟಿ ಪ್ರಚಾರ ಮಾಡಿದರು.
3 ಲಕ್ಷ ದೇಣಿಗೆ:
ಕೆ.ಎಂ ದೊಡ್ಡಿಯಲ್ಲಿ ಜೆಡಿಎಸ್ ಅಭಿಮಾನಿಗಳು ಚುನಾವಣಾ ವೆಚ್ಚಕ್ಕಾಗಿ 3 ಲಕ್ಷ ರೂ.ಗಳ ದೇಣಿಗೆಯನ್ನು ಸಿಎಂ ಕುಮಾರಸ್ವಾಮಿಗೆ ನೀಡಿದರು. ಬಹಿರಂಗ ಸಭೆಯಲ್ಲಿ ಘೋಷಣೆ ಮಾಡಿ ಹಣವನ್ನು ನೀಡಿದರು. ಅಭಿಮಾನಿಗಳ ದೇಣಿಗೆ ಪಡೆದ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ದೇವೇಗೌಡ, ರಾಹುಲ್ ಗಾಂಧಿ ಕೆ.ಆರ್. ನಗರದಲ್ಲಿ ಪ್ರಚಾರ ಮಾಡ್ಲಿಕ್ಕೆ ಎರಡು ಕಾರಣ ಇದೆ. ಮೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡ್ಲಿಕ್ಕೆ ಕೆ.ಆರ್.ನಗರ ಆಯ್ಕೆ ಮಾಡಿಕೊಂಡಿದ್ದಾರೆ. ನಿಖಿಲ್, ವಿಜಯ್ ಶಂಕರ್, ಧ್ರುವನಾರಾಯಣ್ ಪರ ಪ್ರಚಾರ ಮಾಡ್ತಾರೆ. ನಾನೂ ಕೂಡಾ ಕೆ.ಆರ್ ನಗರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದರು.
ನಿಖಿಲ್ ಪರವಾಗಿ ಅಪ್ಪ, ತಾತ ಪ್ರಚಾರ ನಮಗೆ ಹೆಚ್ಚಿನ ಪ್ರಮಾಣದ ಕಾವೇರಿ ನೀರು ಬರಬೇಕು. ಮೇಕೆದಾಟು ಕಟ್ಟೋ ಸಂಬಂಧ ಕೋರ್ಟ್ ಮೊರೆ ಹೋಗಿದ್ದಾರೆ. ಎಷ್ಟು ನೀರನ್ನು ನಮ್ಮಿಂದ ಪಡೆದುಕೊಂಡಿದ್ರೂ ಅವರಿಗೆ ಸಮಾಧಾನ ಆಗಿಲ್ಲ ಎಂದು ನಿಖಿಲ್ ಗೆಲುವಿಗೆ ಕಾವೇರಿ ಅಸ್ತ್ರ ಬಳಸಿಕೊಂಡರು.
ಕುಮಾರಸ್ವಾಮಿಗೆ ಎರಡು ಬಾರಿ ಒಪನ್ ಹಾರ್ಟ್ ಸರ್ಜರಿ ಆಗಿದೆ. ಅವರು ಮುಖ್ಯಮಂತ್ರಿಯಾಗೋದು ಬೇಡ ಅಂತಾ ಹೇಳಿದ್ದೆ. ಮೋದಿ ವಿರುದ್ಧ ಕೆಲ್ಸ ಮಾಡಲು ದೇಶದ ದಿಗ್ಗಜರನ್ನು ಒಟ್ಟುಗೂಡಿಸಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅದರ ಪರಿಣಾಮ ಬೈ ಎಲೆಕ್ಷನ್ನಲ್ಲಿ ನಾವು ಗೆದ್ವಿ ಎಂದರು.
ದೆಹಲಿಯಲ್ಲಿ ಕೇಳಿದ್ರೆ ಐಟಿ ದಾಳಿ ಮಾಡಿಲ್ಲ ಅಂತಾ ಹೇಳಿದ್ದಾರೆ. ಸುಮಲತಾಗೆ ಕಾವೇರಿ, ಕೃಷ್ಣಾ ಹೋರಾಟದ ಬಗ್ಗೆ ಏನು ಗೊತ್ತು. ನಾನು ಅಂಬರೀಶ್ ಕೆಲ್ಸ ಮುಂದುವರೆಸೋದಕ್ಕೆ ಬಂದಿದ್ದೇನೆ ಅಂತಾರೆ. ಅವರಿಗೆ ಯಾವ ಕೆಲಸ ಗೊತ್ತು. ಅಂಬರೀಶ್ ಅಭಿವೃದ್ಧಿ ಏನು ಮುಂದುವರೆಸ್ತಾರೆ. ಕಾವೇರಿ, ಕೃಷ್ಣಾ ಹೋರಾಟದ ಬಗ್ಗೆ ಅವರಿಗೆ ಗೊತ್ತಾ. ಕುಮಾರಸ್ವಾಮಿ ಡಾ. ರಾಜ್ಗಿಂತ ಅಂಬರೀಶ್ಗೆ ಹೆಚ್ಚಿನ ಗೌರವ ಕೊಡ್ತಿದ್ರು. ಆದ್ದರಿಂದಲೇ ಅವರ ಸಂಸ್ಕಾರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅಂತಹವರ ಬಗ್ಗೆ ಮಾತನಾಡೋದು ಸರಿಯೇ ಎಂದು ಪ್ರಶ್ನಿಸಿದರು.