ಕರ್ನಾಟಕ

karnataka

ETV Bharat / state

ಪಾಂಡವಪುರ ಬೇಬಿ ಬೆಟ್ಟದ ನಿಷೇಧಿತ ಪ್ರದೇಶದಲ್ಲಿ ಸ್ಫೋಟಕಗಳು ಪತ್ತೆ - ಸ್ಫೋಟಕಗಳ ಪತ್ತೆ ಹಾಗೂ ನಿಷ್ಕ್ರಿಯ ತಂಡ

ಕಳೆದ ಒಂದುವರೆ ತಿಂಗಳಿಂದ ಸಾಕಷ್ಟು ವಿವಾದ ಮೂಡಿಸಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ನಿಷೇಧಿತ ಗಣಿ ಪ್ರದೇಶಗಳಲ್ಲಿ ಸ್ಫೋಟಕಗಳು ಪತ್ತೆಯಾಗಿವೆ.

Detected explosives in baby hill at mandya
ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ನಿಷೇಧಿತ ಗಣಿ ಪ್ರದೇಶಗಳಲ್ಲಿ ಸ್ಫೋಟಕಗಳು ಪತ್ತೆ

By

Published : Aug 7, 2021, 9:55 AM IST

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟಕಗಳ ಪತ್ತೆ ಹಾಗೂ ನಿಷ್ಕ್ರಿಯ ತಂಡ (ಎಸಿ ಮತ್ತು ಬಿಡಿಡಿಎಸ್) ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಫೋಟಕಗಳನ್ನು ಪತ್ತೆ ಹಚ್ಚಿದೆ.

ಮೈಸೂರು, ಹಾಸನ ಹಾಗೂ ಬೆಂಗಳೂರಿನಿಂದ ಆಗಮಿಸಿದ್ದ ಸ್ಫೋಟಕಗಳ ಪತ್ತೆ ಹಾಗೂ ನಿಷ್ಕ್ರಿಯ ತಂಡದ 30 ಜನ ಸಿಬ್ಬಂದಿ ಶೋಧ ಕಾರ್ಯ ನಡೆಸಿದರು. ನಾಲ್ಕು ವಿಭಾಗಗಳಾಗಿ ಪ್ರತ್ಯೇಕಗೊಂಡ ತಂಡದ ಸದಸ್ಯರು ಬೇಬಿ ಬೆಟ್ಟದ ಕಾವೇರಿಪುರ, ತಿಂಡಬೋಗನಹಳ್ಳಿ, ಹೊನಗಾನಹಳ್ಳಿ ಹಾಗೂ ರಾಗಿಮುದ್ದನಹಳ್ಳಿ ಗ್ರಾಮಗಳ ಸರ್ವೇ ನಂಬರ್​ನಲ್ಲಿರುವ ಕ್ವಾರಿಗಳು ಮತ್ತು ಕ್ರಷರ್‌ಗಳ ಸುತ್ತಲಿನ ಪ್ರದೇಶದಲ್ಲಿ ಶೋಧ ನಡೆಸಿದರು.

ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ನಿಷೇಧಿತ ಗಣಿ ಪ್ರದೇಶಗಳಲ್ಲಿ ಸ್ಫೋಟಕಗಳು ಪತ್ತೆ

ಸ್ಫೋಟಕಗಳನ್ನು ಪತ್ತೆಹಚ್ಚಲು ತಂಡಕ್ಕೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಅರಣ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದರು. ಜೊತೆಗೆ ಶ್ವಾನ ಹಾಗೂ ಮೆಟಲ್ ಡಿಟೆಕ್ಟರ್‌ಗಳನ್ನು ಬಳಸಿಕೊಂಡು ಸುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಶೋಧಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಎಸ್.ಅಶ್ವಥಿ, ಉಪವಿಭಾಗಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ತಹಶೀಲ್ದಾರ್‌ ಪ್ರಮೋದ್ ಎಲ್. ಪಾಟೀಲ್ ಹಾಜರಿದ್ದರು.

ಜಿಲೆಟಿನ್ ಕಡ್ಡಿಗಳು ಪತ್ತೆ:

ಶೋಧ ಕಾರ್ಯದ ವೇಳೆ ಹೊನಗಾನಹಳ್ಳಿ ಸರ್ವೇ ನಂಬರ್​ನ ಕ್ವಾರಿಯೊಂದರ ಬಳಿ 6 ಜಿಲೆಟಿನ್ ಕಡ್ಡಿ ಹಾಗೂ ಕಲ್ಲು ಬ್ಲಾಸ್ಟಿಂಗ್‌ಗೆ ಬಳಸುವ ವೈರ್ ಪತ್ತೆಯಾಗಿದೆ. ಶಿಂಡಬೋಗನಹಳ್ಳಿ ಕ್ವಾರಿಯಲ್ಲಿ ಎರಡು ಜಿಲೆಟಿನ್ ಕಡ್ಡಿಗಳು, ಸರ್ವೇ ನಂ 1 ರಲ್ಲಿ 12 ಡಿಟೋನೇಟರ್, 5 ಎಲೆಕ್ಟ್ರಿಕ್ ಡಿಟೋನೇಟರ್, 4 ಜಿಲೆಟಿನ್ ಕಡ್ಡಿ ಹಾಗೂ ಸ್ಫೋಟಕ್ಕೆ ಬಳಸುವ ವೈರ್​ಗಳ ಜತೆಗೆ ಎಲೆಕ್ಟ್ರಿಕ್ ಬೋರ್ಡ್, ಹಾರೆ, ಸುತ್ತಿಗೆ, ನೂರಾರು ಉಳಿಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಮೂರು ದಿನ ಶೋಧ ಕಾರ್ಯ:

ಬೇಬಿ ಬೆಟ್ಟ ಅಮೃತ ಮಹಲ್ ಕಾವಲ್‌ನ 1,463 ಎಕರೆ ವಿಸ್ತೀರ್ಣದ ಗಣಿಗಾರಿಕೆ ಪ್ರದೇಶ ಸೇರಿದಂತೆ ಹೆಚ್ಚಾಗಿ ಗಣಿಗಾರಿಕೆ ನಡೆಯುವ ಹೊನಗಾನಹಳ್ಳಿ, ರಾಗಿಮುದ್ದನಹಳ್ಳಿ, ಚಿನಕುರಳಿ, ಕಾವೇರಿಪುರ ಗ್ರಾಮಗಳ ಸುತ್ತಲೂ 2,100ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ 3 ದಿನಗಳ ಕಾಲ ಸ್ಫೋಟಕಗಳ ಪತ್ತೆ ಕಾರ್ಯ ನಡೆಯಲಿದೆ.

ABOUT THE AUTHOR

...view details