ಮಂಡ್ಯ: ಮನೆಯೆಂದರೆ ಕಿಟಕಿ, ಬಾಗಿಲಿನ ಜೊತೆಗೆ ಉತ್ತಮ ಪರಿಸರ ಅವಶ್ಯಕ. ಒಂದು ಕುಟುಂಬಕ್ಕೆ ಮನೆಯಲ್ಲಿ ಪ್ರತ್ಯೇಕ ಕೋಣೆ, ಬಚ್ಚಲು ಮನೆ ಇರಬೇಕು. ಆದರೆ ಸರ್ಕಾರ ನಿರ್ಮಿಸಿಕೊಟ್ಟ ಮನೆಯನ್ನ ನೀವು ನೋಡಿದರೆ ಅಸಹ್ಯ ಪಡೋದರಲ್ಲಿ ಅನುಮಾನವೇ ಇಲ್ಲ. ಕೇವಲ 15x10 ಚದರ್ ಅಡಿಯ ಮನೆಯಲ್ಲೇ ಸ್ಲಂ ನಿವಾಸಿಗಳು ಬದುಕಬೇಕು. ಅವರ ನಿಕೃಷ್ಟ ಬದುಕಿನ ಸ್ಟೋರಿ ಇಲ್ಲಿದೆ ನೋಡಿ.
ಇವು ಸರ್ಕಾರ ತಾತ್ಕಾಲಿಕವಾಗಿ ನಿರ್ಮಿಸಿ ಕೊಟ್ಟಿರುವ ಮನೆಗಳು. ಒಂದೇ ವರ್ಷದಲ್ಲಿ ಮನೆ ಕಟ್ಟಿ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದ ಸರ್ಕಾರ 4 ವರ್ಷಗಳೇ ಕಳೆದರೂ ಮನೆ ನಿರ್ಮಾಣ ಮಾಡಿ ಈ ಕೊಳಗೇರಿ ನಿವಾಸಿಗಳಿಗೆ ನೀಡಿಲ್ಲ. ಸರ್ಕಾರ ಕಣ್ಮುಚ್ಚಿ ಕುಳಿತ ಹಿನ್ನೆಲೆ ಮಂಡ್ಯ ನಗರದ ಹಾಲಹಳ್ಳಿ ಕೊಳಗೇರಿ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.
ಈ ತಗಡಿನ ಮನೆಗಳ ಇತಿಹಾಸ ನೋಡುವುದಾದರೆ, ಹಾಲಹಳ್ಳಿಯ ಕೊಳಗೇರಿಯಲ್ಲಿದ್ದ ಮನೆಗಳು ದುಸ್ಥಿತಿಯಲ್ಲಿದ್ದವು. ಇದನ್ನು ಗಮನಿಸಿದ ಸರ್ಕಾರ, 2014ರಲ್ಲಿ ಮನೆಗಳನ್ನು ಕೆಡವಿ ಹೊಸ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ನಂತರ ಅಂಬರೀಶ್ ಅವರು ವಸತಿ ಸಚಿವರಾದ ಮೇಲೆ ಇಲ್ಲಿನ ನಿವಾಸಿಗಳಿಗೆ ಒಂದು ವರ್ಷದ ಅವಧಿಯಲ್ಲಿ ಹೊಸ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು.
ಮನೆಗಿಲ್ಲ ಕಿಟಕಿ, ಬಾಗಿಲು.. ನಾಲ್ಕು ವರ್ಷದಿಂದ ಅಲ್ಲೇ ವಾಸ ಮನೆ ಕೆಡವಿದ ಮೇಲೆ ನಿವಾಸಿಗಳಿಗೆ ತಾತ್ಕಾಲಿಕವಾಗಿ ಸಮೀಪವೇ 15x10 ಚದರ್ ಅಡಿಯಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಡಲಾಯಿತು. ಈ ಶೆಡ್‌ಗಳಿಗೆ ಕಿಟಕಿಯಾಗಲಿ, ಬಾಗಿಲಾಗಲಿ ಇಲ್ಲ. ಈ ಇಕ್ಕಟ್ಟಿನಲ್ಲೇ ನಾಲ್ಕರಿಂದ ಐದು ಮಂದಿ ವಾಸ ಮಾಡಬೇಕಾಗಿದೆ. ಮಳೆ ಬಂದರೆ ಯಾರಿಗೂ ನಿದ್ದೆ ಇಲ್ಲ. ಸಮೀಪವೇ ಕೊಳಚೆ ಚರಂಡಿ ಇದೆ. ಪುರುಷರು ಮನೆಯ ಹೊರಗೆ ನಿದ್ದೆ ಮಾಡಬೇಕು, ಹೆಣ್ಣು ಮಕ್ಕಳು ಸ್ನಾನ ಮಾಡಲೂ ಸಾಧ್ಯವಿಲ್ಲ. ಚಿಕ್ಕ ಪ್ರದೇಶದಲ್ಲೇ ಎಲ್ಲವೂ ನಡೆಯಬೇಕಿದೆ.
ಮನೆಗಿಲ್ಲ ಕಿಟಕಿ, ಬಾಗಿಲು.. ನಾಲ್ಕು ವರ್ಷದಿಂದ ಸ್ಲಂ ನಿವಾಸಿಗಳ ಬದುಕು ನರಕಯಾತನೆ ಒಂದು ವರ್ಷ ಅವಧಿ ನೀಡಿದ್ದ ಸರ್ಕಾರ ನಾಲ್ಕು ವರ್ಷಗಳೇ ಕಳೆದರೂ ಸ್ಲಂ ನಿವಾಸಿಗಳತ್ತ ತಿರುಗಿ ನೋಡಿಲ್ಲ. ಉತ್ತಮ ಬದುಕು ಕಟ್ಟಿಕೊಳ್ಳಲು ಇಲ್ಲಿನ ನಿವಾಸಿಗಳು ಹೆಣಗಾಡುತ್ತಿದ್ದಾರೆ. ಇಂದೋ ನಾಳೆಯೋ ಮನೆಗಳು ಸಿಗಬಹುದು ಎಂದು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಸದ್ಯ ಸರ್ಕಾರ ನಿರ್ಮಾಣ ಮಾಡಿದ ಕಿಟಕಿ, ಬಾಗಿಲು ಇಲ್ಲದ, ವಾಸಿಸಲು ಯೋಗ್ಯವಲ್ಲದ ಈ ಶೆಡ್‌ಗಳಲ್ಲಿ 800ಕ್ಕೂ ಹೆಚ್ಚು ಕುಟುಬಗಳು ಬದುಕುತ್ತಿವೆ.
ಇನ್ನಾದರೂ ಸರ್ಕಾರ ಈ ಕೊಳಗೇರಿ ಜನರಿಗೆ ಮನೆ ನಿರ್ಮಿಸಿಕೊಟ್ಟು ಮೌಲ್ಯಯುತ ಜೀವನಕ್ಕೆ ಅನುವು ಮಾಡಿಕೊಡಬೇಕಿದೆ.