ಮಂಡ್ಯ: ಇದೀಗ ಜಿಲ್ಲೆಯ ಎಳನೀರು ಮಾರುಕಟ್ಟೆಯ ಮೇಲೂ ಕೊರೊನಾ ಪರಿಣಾಮ ಬೀರಿದೆ.
ಕೊರೊನಾ ಕಂಟಕ... ಎಳನೀರು ಮಾರುಕಟ್ಟೆಯಲ್ಲಿ ಆರೋಗ್ಯ ತಪಾಸಣೆಗೆ ಆಗ್ರಹ - mandya latest news
ಕೊರೊನಾ ವೈರಸ್ ಭೀತಿ ಹೆಚ್ಚುತ್ತಿದ್ದು, ಇದೀಗ ಮದ್ದೂರಿನ ಎಪಿಎಂಸಿ ಎಳನೀರು ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಹಾಗಾಗಿ ಹೊರ ರಾಜ್ಯದಿಂದ ಬರುವವರಿಗೆ ಆರೋಗ್ಯ ತಪಾಸಣೆ ಮಾಡಬೇಕೆಂದು ಇಲ್ಲಿನ ವರ್ತಕರು ಒತ್ತಾಯಿಸಿದ್ದಾರೆ.
ವೈರಸ್ ಭಯದಿಂದ ಎಳನೀರಿನ ಬೆಲೆ ಕುಸಿತ ಕಂಡಿದ್ದು, ಕನಿಷ್ಠ 20 ರೂಪಾಯಿಗೆ ಮಾರಾಟವಾಗುತ್ತಿದ್ದ ಎಳನೀರು ಇದೀಗ 15 ರೂಪಾಯಿಗೆ ಮಾರಾಟವಾಗುತ್ತಿದೆ. ಜಿಲ್ಲೆಯಲ್ಲಿ ಎಳನೀರಿಗೆ ಸರಿಯಾದ ಬೆಲೆ ಸಿಗದೆ ರೈತರು, ವ್ಯಾಪಾರಿಗಳು ಆತಂಕ ಎದುರಿಸುತ್ತಿದ್ದಾರೆ. ಹಾಗಾಗಿ ವ್ಯಾಪಾರದ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಬರುವವರಿಗೆ ಆರೋಗ್ಯ ತಪಾಸಣೆ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಮದ್ದೂರಿನ ಎಪಿಎಂಸಿ ಎಳನೀರು ಮಾರುಕಟ್ಟೆಗೆ ಹೊರರಾಜ್ಯದಿಂದ ವ್ಯಾಪಾರಿಗಳು ಹಾಗೂ ಚಾಲಕರು ಆಗಮಿಸುತ್ತಿದ್ದಾರೆ. ಹೀಗೆ ಬರುತ್ತಿರುವ ವ್ಯಕ್ತಿಗಳನ್ನು ತಪಾಸಣೆ ನಡೆಸದೆ ಮಾರುಕಟ್ಟೆಯೊಳಗೆ ಬಿಡುತ್ತಿರುವುದು ವ್ಯಾಪಾರಸ್ಥರಿಗೆ ಭಯ ಹುಟ್ಟಿಸಿದೆ. ಕೊರೊನಾ ವೈರಸ್ ಯಾವ ವ್ಯಕ್ತಿಯಲ್ಲಿದೆ, ಹೇಗೆ ಬರುತ್ತದೆ ಎಂಬ ಆತಂಕ ಶುರುವಾಗಿದೆ. ಹೀಗಾಗಿ ಹೊರ ರಾಜ್ಯದಿಂದ ಬರುವ ವ್ಯಾಪಾರಿಗಳು ಹಾಗೂ ಚಾಲಕರನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಮಾರುಕಟ್ಟೆಯ ದಲ್ಲಾಳಿಗಳು ಆಗ್ರಹಿಸಿದ್ದಾರೆ.